ಸಂಗೀತ ನಿರ್ದೇಶಕ, ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಸದ್ದಿಲ್ಲದೆ, ಡಿವೋರ್ಸ್ ಪಡೆದುಕೊಂಡು ದೂರವಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ನಾಲ್ಕು ವರ್ಷದ ದಾಂಪತ್ಯವನ್ನು ಈ ಜೋಡಿ ಕಡಿದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಡಿವೋರ್ಸ್ ಪಡೆದ ವಿಚಾರ ಹೊರಬೀಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ತೂರಿಬಂದವು. ಅದರಲ್ಲೂ ನಿವೇದಿತಾ ಗೌಡ ಅವರ ವಿರುದ್ಧವೂ ಸಾಕಷ್ಟು ಮಂದಿ ಕಾಮೆಂಟ್ ಮಾಡಿದರು. ಈ ನಡುವೆ ವಿಚ್ಛೇದನದ ಹಿಂದಿನ ಅಸಲಿ ವಿಚಾರವನ್ನು ಚಂದನ್ ಶೆಟ್ಟಿ ಬಹಿರಂಗವಾಗಿ ಹೇಳಿಕೊಂಡಿದ್ದರು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಕೊರತೆ ಇದೆ. ಆ ಕಾರಣಕ್ಕೆ ಡಿವೋರ್ಸ್ ಪಡೆದಿದ್ದೇವೆ ಎಂದಿದ್ದರು. ಇದೀಗ ಡಿವೋರ್ಸ್‌ಗೆ ಮೂರನೇ ವ್ಯಕ್ತಿ ಕಾರಣ ಎನ್ನುತ್ತಿದ್ದಾರೆ!
ಈ ಬಗ್ಗೆ ಮಾತನಾಡಿರುವ ಚೆಂದನ್, ಮೂರನೇ ವ್ಯಕ್ತಿ ಯಾರು ಎಂದು ಮಾತ್ರ ಹೇಳಿಲ್ಲ. “ಅದೇ ಕಾರಣಾನೇ.. ಫ್ಯಾಮಿಲಿ ಒಡೆದು ಹೋಗಲು ಮೂರನೇ ವ್ಯಕ್ತಿನೇ ಕಾರಣ ಆಗ್ತಾರೆ. ಆ ವ್ಯಕ್ತಿ ಯಾರು ಏನು ಅಂತ ನಮಗೂ ಕೆಲವೊಮ್ಮೆ ಗೊತ್ತಿರಲ್ಲ. ಮೂರನೇ ವ್ಯಕ್ತಿ ಕಾರಣ ಆಗ್ತಾರೆ. ಆ ಮೂರನೇ ವ್ಯಕ್ತಿ ನಮ್ಮ ಒಳಗೇ ಇರಬಹುದು. ಏಕೆಂದರೆ ಒಬ್ಬೊಬ್ಬರಿಗೆ ಎರಡೆರಡು ಶೇಡ್‌ಗಳಿರಬಹುದು. ಒಬ್ಬರು ಒಂದು ವಿಚಾರವನ್ನು ಮುಂದೆ ಒಂದು ರೀತಿ ಮಾತನಾಡುತ್ತಾರೆ. ಹಿಂದೆ ಇನ್ನೊಂದು ಮಾತನಾಡುತ್ತಾರೆ. ಆ ವ್ಯಕ್ತಿಗೆ ಎರಡೆರಡು ವ್ಯಕ್ತಿತ್ವಗಳು ಇರುತ್ತವೆ. ಅದು ಸಹಜ” ಎಂದಿದ್ದಾರೆ. ಆದರೆ, ತಮ್ಮ ಜೀವನದಲ್ಲಿ ಬಂದ ಆ ಮೂರನೇ ವ್ಯಕ್ತಿ ಯಾರು ಎಂಬುದನ್ನು ಬಾಯಿ ಬಿಡಲಿಲ್ಲ ಚಂದನ್.