ಉಪನ್ಯಾಸಕ, ಸಾಹಿತಿ, ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ (76) ಭಾನುವಾರ ರಾತ್ರಿ ಚನ್ನಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಟ್ಟಸ್ವಾಮಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಪುಟ್ಟಸ್ವಾಮಿ ಅವರ ಕುಟುಂಬ ಮೈಸೂರಿನಲ್ಲಿ ನೆಲೆಸಿತ್ತು. ಆದರೆ, ಪುಟ್ಟಸ್ವಾಮಿ ಮಾತ್ರ ಚನ್ನಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಗಾಗ ಮೈಸೂರಿಗೆ ಹೋಗಿ ಬರುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ‘ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡ ಜೀವನ 3. 28.07.24 53 2.40 ಇತಿ ಭೂಹಳ್ಳಿ ಪುಟ್ಟಸ್ವಾಮಿ’ ಎಂದು ಪೋಸ್ಟ್ ಮಾಡಿ ಚನ್ನಪಟ್ಟಣದಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ವಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇತಿಹಾಸ ಉಪನ್ಯಾಸಕರಾಗಿದ್ದ ಪುಟ್ಟಸ್ವಾಮಿ ಸಾಹಿತಿಯೂ ಆಗಿದ್ದರು. ಸುಮಾರು 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ತಮ್ಮ ಸ್ವಂತ ಹಣದಲ್ಲಿ ತಾಲೂಕಿನಲ್ಲಿ ಗಿಡ ನೆಡುವ ಕಾಯಕವನ್ನೂ ಮಾಡುತ್ತಿದ್ದರು. ಇವರಿಂದಾಗಿ 40 ಎಕರೆ ಜಾಗ ಹಸಿರಾಗಿ ನಳನಳಿಸುತ್ತಿದೆ. ತಮ್ಮದೇ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು