ತುಮಕೂರು: ಕಿಡ್ನಾಪ್ ಮಾಡಿ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ ಜಾಲವನ್ನು ತುಮಕೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಬ್ಬಿಯಲ್ಲಿ 11 ತಿಂಗಳ ಮಗು ಕಿಡ್ನಾಪ್ ಪ್ರಕರಣದ ಬೆನ್ನತ್ತಿದಾಗ ಈ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 5 ಮಂದಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಇನ್ನೂ 1 ಮಗು ಸಾವನ್ನಪ್ಪಿದ್ದು, 3 ಮಕ್ಕಳಿಗಾಗಿ ಶೋಧ ನಡೆಸುತ್ತಿದ್ದಾರೆ. ಗರ್ಭ ಧರಿಸಿದ ಅವಿವಾಹಿತ ಮಹಿಳೆಯರು ಹಾಗೂ ಅನೈತಿಕ ಗರ್ಭ ಧರಿಸಿದವರಿಂದ ಮಕ್ಕಳನ್ನು ಖರೀದಿ ಮಾಡಿ 2ರಿಂದ 3 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಹುಳಿಯಾರಲ್ಲಿ ಮೆಹಬೂಬ್ ಪಾಷಾ ಎಂಬಾತನ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ಕೊಳ್ಳುವವರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು ಅವರಿಗೆ ಹುಟ್ಟಿದ ಮಗುವೆಂದು ಸರ್ಟಿಫಿಕೇಟ್ ನೀಡಲಾಗುತ್ತಿತ್ತು. ಎಸ್‌ಪಿ ಕೆ.ವಿ.ಅಶೋಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ನಡೆಸಿದ್ದು,
ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಡಾಕ್ಟರ್ ಹಾಗೂ ನರ್ಸ್‌ಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಂಧಿತರ ಪೈಕಿ ಪೂರ್ಣಿಮಾ ದೊಡ್ಡೇರಿ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿದ್ದು, ಸೌಜನ್ಯ ಶಿರಾನಗರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೌಜನ್ಯ ಮೇಲೆ ಈ ಹಿಂದೆ ಭ್ರೂಣ ಹತ್ಯೆ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ