
ಪುಣೆ:ಇಬ್ಬರ ಸಾವಿಗೆ ಕಾರಣವಾದ ಪುಣೆಯ ಪೋರ್ಶೆ ಕಾರು ಅಪಘಾತ ಪ್ರಕರಣದ ಆರೋಪಿ ಅಪ್ರಾಪ್ತ ಬಾಲಕನನ್ನು ನಿರೀಕ್ಷಣಾ ಮಂದಿರದಿಂದ ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ಆದೇಶಿಸಿದೆ.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ, ಬಾಲ ನ್ಯಾಯ ಮಂಡಳಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸಿದೆ.
ಬಾಲ ನ್ಯಾಯ ಮಂಡಳಿಯ ರಿಮ್ಯಾಂಡ್ ಆದೇಶವು ಕಾನೂನುಬಾಹಿರವಾಗಿದೆ. ಕಾನೂನು ಸಂಘರ್ಷದಲ್ಲಿರುವ ಬಾಲಕನ ವಯಸ್ಸನ್ನು ಪರಿಗಣಿಸಬೇಕಾಗಿದೆ. ‘ಬಾಲಕನನ್ನು ಕೂಡಲೇ ಬಿಡುಗಡೆ ಮಾಡಬೇಕು. ಆತ ‘ತಂದೆಯ ಚಿಕ್ಕಮ್ಮ ಆರೈಕೆಯಲ್ಲಿರುತ್ತಾನೆ’ ಎಂದು ನ್ಯಾಯಾಲಯ ಹೇಳಿದೆ.
ಬಿಡುಗಡೆಯ ನಂತರ ಮನಶ್ಶಾಸ್ತ್ರಜ್ಞರೊಂದಿಗಿನ ಬಾಲಕನ ಕೌನ್ಸೆಲಿಂಗ್ ಮುಂದುವರಿಸಬೇಕು ನ್ಯಾಯಾಲಯ ನಿರ್ದೇಶಿಸಿದೆ.
ಬಾಲಕನನ್ನು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೂ, ಆತನನ್ನು ಬಾಲ ನ್ಯಾಯ ಮಂಡಳಿ ನಿರೀಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದು ಹೇಗೆ? ಎಂದು ಕಳೆದ ವಾರ ವಿಚಾರಣೆಯ ವೇಳೆ ಹೈಕೋರ್ಟ್ ಪ್ರಶ್ನಿಸಿತ್ತು.
ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಅತಿ ವೇಗದಲ್ಲಿದ್ದ ಪೋರ್ಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತಕ್ಕೀಡಾದ ಕಾರನ್ನು ಪಾನಮತ್ತ ಸ್ಥಿತಿಯಲ್ಲಿದ್ದ ಬಾಲಕ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.