September 19, 2024

ಚುನಾವಣೆ ನೀತಿಸಂಹಿತೆ ಜಾರಿಯಾಗುವುದಕ್ಕೆ ಮುಂಚಿತವಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ 147 ಟೆಂಡರ್‌ಗಳಿಗೆ ಒಪ್ಪಿಗೆ ನೀಡಲಾಗಿತ್ತು. ಈಗ ಆ ಟೆಂಡರ್ ಗಳ ಅನುಷ್ಠಾನಕ್ಕೆ ಸಭೆ ನಡೆಸಲಾಗಿದೆ. ಸಿಎಂ ನೇತೃತ್ವದಲ್ಲಿ ನಡೆದ ಈ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌ ಪರಿಶೀಲನೆ ನಡೆಸಲಾಗಿದೆ. ಟೆಂಡರ್‌ ಕರೆಯಲು ನೀಡಿರುವ ಆಡಳಿತಾತ್ಮಕ ಮಂಜೂರಾತಿಯ ಪೈಕಿ ಎಷ್ಟು ಟೆಂಡರ್‌ ಕರೆದು ಕೆಲಸ ಪ್ರಾರಂಭವಾಗಿದೆ ಎಂದು ಸಭೆಯಲ್ಲಿ ಅವಲೋಕಿಸಲಾಗಿದೆ. ಇನ್ನೂ 94 ಪ್ರಸ್ತಾವಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. 19 ಪ್ರಸ್ತಾವನೆಗಳು ಪರಿಶೀಲನೆಯಲ್ಲಿದ್ದು, 18 ಪ್ರಸ್ತಾವನೆಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಕಾಮಗಾರಿಗಳು ಮುಕ್ತಾಯವಾಗಿವೆ.

53 ಪ್ರಸ್ತಾವನೆಗಳು ಟೆಂಡರ್‌ ಕರೆಯಲು ಬಾಕಿ ಇವೆ ಎನ್ನಲಾಗಿದೆ. ಸಚಿವ ಸಂಪುಟ ಇವುಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಆಡಾಳಿತಾತ್ಮಕ ಮಂಜೂರಾತಿ ನೀಡಿರುವ ಎಲ್ಲಾ ಟೆಂಡ‌ರ್ ಗಳಿಗೆ ಮುಂದಿನ ಒಂದು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ 2025 ಫೆಬ್ರವರಿ 12-14ರವರೆಗೆ ಇನ್ವೆಸ್ಟ್ ಕರ್ನಾಟಕ -2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ಸಚಿವ ಸಂಪುಟ ಅನುಮೋದಿಸಿದೆ.

ಇನ್ನೂ ಈಗಾಗಲೇ 75 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ 15 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿದೆ. ಕಾರ್ಮಿಕ ಇಲಾಖೆಯಲ್ಲಿ ಇಎಸ್‌ಐ ನಲ್ಲಿ ಗುತ್ತಿಗೆ ವೈದ್ಯರ ವಿಲೀನ ಮಾಡುವ ಬಗ್ಗೆ ಚರ್ಚೆಯಾಗಿ ಮುಂದೂಡಲಾಗಿದೆ. ಕಾನೂನು ಸಲಹೆ ಪಡೆಯಲು ಸೂಚಿಸಲಾಗಿದೆ. ಒಂದೊಂದಾಗಿ ನೋಡೊದಾದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಕೋಟಿ ರೂ.ಗಳ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಸಾರಿಗೆ ಇಲಾಖೆಯಲ್ಲಿ ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹೊಸದಾಗಿ 112 ಪೂರ್ಣ ಕವಚ ನಿರ್ಮಿತ ಬಿಎಸ್. 4 ವೇಗದೂತ ಬಸ್ಸುಗಳನ್ನು 46.48 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಪ್ರಸ್ತಾವನೆಯನ್ನು ಸಚಿವ ಸಂಪುಟ ಒಪ್ಪಿದೆ. 62 ಹೊಸ ಬಸ್ಸುಗಳನ್ನು ಖರೀದಿಸಲು ಹಾಗೂ 50 ಬಸ್ಸುಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ವರ್ಗಾಯಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಏಳನೇ ವೇತನ ಆಯೋಗದ ಬಗ್ಗೆ ಅಧಿಕೃತ ಪ್ರಸ್ತಾವನೆ ಬಂದಿದ್ದು ಈ ಬಗ್ಗೆ ಯಾವುದೇ ನಿರ್ಣಯಗಳಾಗಿಲ್ಲ.

ಗಣಿಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಮೆ: ಭಾರತ್ ಚಿನ್ನದ ಗಣಿ ಸಂಸ್ಥೆ, ಕೆ.ಜಿಎಫ್ ಅವರು ಪಡೆದಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಟೇಲಿಂಗ್ ಡಂಪ್ಸ್ ಗಳಿಗೆ ಎಂ.ಎಂ.ಡಿ.ಆರ್ ಕಾಯ್ದೆಯ ಕಲಂ 17 ರನ್ವಯ ಕೇಂದ್ರ ಸರ್ಕಾರದಿಂದ ಗಣಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತಾವನೆ ಇದ್ದು, ಹೆಚ್ಚಿನ ತಾಂತ್ರಿಕ ವಿವರಗಳು ಅಗತ್ಯವಿರುವುದರಿಂದ ಇದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗಾಗಿ Knowledge Partner ಆಯ್ಕೆ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇ-ಟೆಂಡ‌ರ್ ಕರೆದಿದ್ದು ಟೆಂಡ‌ರ್ ಪ್ರಕಾರ ಈಗಾಗಲೇ ಮೆ: ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈ ಲಿ.,

ಇವರನ್ನು ಜಿಎಸ್‌ಟಿ ಒಳಗೊಂಡಂತೆ 21 ಕೋಟಿ ರೂ. ವೆಚ್ಚದಲ್ಲಿ Knowledge Partner & ನೇಮಕ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯಡಿ ರಾಜ್ಯದಲ್ಲಿ ಕಾನೂನು ಮತ್ತು ನೀತಿ ಗೆ ಅನುಮೋದನೆ ನೀಡುವ ಬಗ್ಗೆ ಎರಡು ಮೂರು ವಿಚಾರಗಳಲ್ಲಿ ಬದಲಾವಣೆ ಅಗತ್ಯವನ್ನು ಮನಗಂಡು ಮುಂದೂಡಲಾಗಿದೆ. ರಾಜ್ಯದ ಆಡಳಿತವನ್ನು ಹೆಚ್ಚು ಬಿಗಿಯಾಗಿ, ಪರಿಣಾಮಕಾರಿಯಾಗಿ, ಜನಸ್ನೇಹಿಯಾಗಿ ಮಾಡಬೇಕು, ವಿಳಂಬ ಆಗದ ಹಾಗೇ ಕೆಲಸಗಳಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡಿದ್ದಾರೆ.

Leave a Reply

Your email address will not be published. Required fields are marked *