September 16, 2024

ನ್ಯಾಯಾಲಯಗಳು ವಿಚಾರಣೆಯ ಸಂದರ್ಭ ಸಕ್ರಿಯವಾಗಿ ಪಾಲ್ಗೊಳ್ಳಬೇಕೇ ಹೊರತು ಕೇವಲ ಟೇಪ್ ರಿಕಾರ್ಡರ್ಗಳಂತೆ ವರ್ತಿಸಕೂಡದು ಎಂದು ಸುಪ್ರೀಂಕೋರ್ಟ್ ಕಿವಿಮಾತು ಹೇಳಿದೆ. ನ್ಯಾಯಾಧೀಶರು ವಿಚಾರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಸಾಕ್ಷಿಗಳಿಂದ ಅಗತ್ಯವಿರುವ ವಿಷಯಗಳನ್ನು ಸಮರ್ಪಕ ಗ್ರಹಿಕೆಯೊಂದಿಗೆ ಪಡೆದುಕೊಳ್ಳಬೇಕಾಗಿದೆ. ಪ್ರಕರಣದ ಕುರಿತು ಸೂಕ್ತ ತೀರ್ಮಾ ನಕ್ಕೆ ಬರಲು ಇದು ಅತ್ಯಂತ ಅಗತ್ಯವೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಹೇಳಿದೆ. ಪತ್ನಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಮಗು ನ್ಯಾಯಾಲಯದ ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷಿಯಾಗಿ ಹೇಳಿಕೆ ನೀಡಿತ್ತು. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿ ಶಿಕ್ಷೆ ಕಾಯಂಗೊಳಿಸುವ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಜೆಐ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠ, ಪಾಟೀ ಸವಾಲಿನ ಮುಖ್ಯ ಉದ್ದೇಶ ಸಾಕ್ಷ್ಯದ ನಿಖರತೆ, ವಿಶ್ವಾಸಾರ್ಹತೆಯನ್ನು ದೃಢಪಡಿಸಿಕೊಳ್ಳುವುದು, ಸಾಕ್ಷಿ ಈಗಾಗಲೇ ಹೇಳಿರುವ ವಾಸ್ತವಾಂಶಗಳನ್ನು ಶೋಧಿಸುವುದು ಮತ್ತು ಹತ್ತಿಕ್ಕಿರುವ ಸತ್ಯಗಳನ್ನು ಬಯಲಿಗೆ ಎಳೆಯುವುದಾಗಿದೆ. ಹೀಗಾಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಪ್ರಕರಣದ ಸತ್ಯಾಸತ್ಯತೆಗಳನ್ನು ಬಯಲಿಗೆಳೆಯಲು ಪ್ರತಿಕೂಲ ಸಾಕ್ಷಿಗಳ ಸಂಪೂರ್ಣ ಪಾಟಿ ಸವಾಲು ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಅವರು ಸಿಆರ್‌ಪಿಸಿ ಸೆಕ್ಷನ್ 161ರ ಅಡಿ ದಾಖಲಾದ ಹೇಳಿಕೆಯಿಂದ ಅವರು ಉದ್ದೇಶಪೂರ್ವಕವಾಗಿ ಹಿಂದೆ ಸರಿಯುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕು.

ಒಂದು ವೇಳೆ ಈ ಜವಾಬ್ದಾರಿಯನ್ನು ಪ್ರಾಸಿಕ್ಯೂಟರ್ ಸಮರ್ಥವಾಗಿ ಮಾಡುತ್ತಿಲ್ಲ ಎನ್ನಿಸಿದರೆ ನ್ಯಾಯಾಧೀಶರೇ ಸತ್ಯ ಹೊರಗೆ ತರಲು ಪ್ರಯತ್ನಿಸಬೇಕು. ಸಾಕ್ಷಿ ಹೇಳಿದ್ದನ್ನಷ್ಟೇ ದಾಖಲಿಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ಸಲಹೆ ನೀಡಿದೆ. ಇದೇ ವೇಳೆ, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಪ್ರತಿಕೂಲ ಸಾಕ್ಷಿಗಳನ್ನು ಪರಿಣಾಮಕಾರಿಯಾಗಿ ಪಾಟಿ ಸವಾಲಿಗೆ ಒಳಪಡಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ

Leave a Reply

Your email address will not be published. Required fields are marked *