November 19, 2024

ರಾಜ್ಯ ಸರ್ಕಾರದಿಂದ ನಕಲಿ ವೈದ್ಯರ ಹಾವಳಿ ಎಷ್ಟೇ ತಡೆದರೂ ಕೂಡ ಅಂತಹ ಕೇಸ್ ಗಳು ವರದಿ ಆಗ್ತಾನೆ ಇರುತ್ತವೆ. ಹೀಗಾಗಿ ಅದನ್ನ ತಪ್ಪಿಸೋದಕ್ಕೆ ಸರ್ಕಾರ ಈಗ ದಿಟ್ಟ ಹೆಜ್ಜೆ ಇಟ್ಟಿದೆ. ಹೌದು, ಖಾಸಗಿ ಆಸ್ಪತ್ರೆಗಳ ಮುಂಭಾಗದಲ್ಲಿ KPME ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸವುದು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ನಕಲಿ ವೈದ್ಯಕೀಯ ವೃತ್ತಿಯನ್ನು ಬೇರುಸಮೇತ ಕಿತ್ತೊಗೆಯಲು ಆರೋಗ್ಯ ಇಲಾಖೆಯು ಆದೇಶವನ್ನು ಹೊರಡಿಸಿದ್ದು ಇದರನ್ವಯ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್’ಗಳು ತಮ್ಮ KPME ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸವುದು ಕಡ್ಡಾಯವಾಗಿದೆ ಎಂದು ಹೇಳಿದೆ.

ಇಷ್ಟೇ ಅಲ್ಲದೆ, ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ಹಸಿರು ಬಣ್ಣದ ಬೋರ್ಡ್ ಬಳಸುವ ಮೂಲಕ ಬಣ್ಣ ಸಂಹಿತೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಅಂತ ಸೂಚಿಸಿದೆ. ಖಾಸಗಿ ವೈದ್ಯಕೀಯ ಆಸ್ಪತ್ರೆಗಳು ಈ ನಿಯಮಗಳನ್ನು ಅನುಸರಿಸುವಲ್ಲಿ ವಿಫಲವಾದಲ್ಲಿ KPME ತಿದ್ದುಪಡಿ ಕಾಯಿದೆ 2017 ರ ಸೆಕ್ಷನ್ 19(5) ರ ಅನ್ವಯ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದೆ.

ನೋಂದಣಿ ನಾಮಫಲಕ: ಬೋರ್ಡ್ ಕನಿಷ್ಠ ಏಳು ಅಡಿ ಅಗಲ ಮೂರು ಅಡಿ ಎತ್ತರ ಇರಬೇಕು. ಕೆಪಿಎಂಇ ನೋಂದಣಿ ಸಂಖ್ಯೆಯನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವಂತೆ 120 ಸೆಂಟಿಮೀಟರ್ ಅಗಲ 20 ಸೆಂಟಿಮೀಟ‌ರ್ ಎತ್ತರ ಇರುವಂತೆ ಪ್ರದರ್ಶಿಸಬೇಕು. ಕೆಪಿಎಂಇ ಪ್ರಮಾಣಪತ್ರದಲ್ಲಿ ನಮೂದಿಸಿರುವಂತೆ ಮಾಲೀಕರ ಹೆಸರನ್ನು 120 ಸೆಂಟಿಮೀಟರ್ ಅಗಲ 15 ಸೆಂಟಿಮೀಟ‌ರ್ ಎತ್ತರ ಅಳತೆಯಲ್ಲಿ ತೋರಿಸಬೇಕು. ಎಲ್ಲಾ ಅಕ್ಷರಗಳು ಕಪ್ಪು ಬಣ್ಣದಲ್ಲಿರಬೇಕು ಮತ್ತು ಬೋರ್ಡ್ ಸ್ಥಿರವಾಗಿರಬೇಕು.

ಅಲೋಪತಿ ವೈದ್ಯರಾಗಿದ್ದಲ್ಲಿ ಆಕಾಶ ನೀಲಿ ಬಣ್ಣದ ನೋಂದಣಿ ನಾಮ ಫಲಕ ಅಳವಡಿಸಬೇಕು. ಆಯುರ್ವೇದ ವೈದ್ಯರಾಗಿದ್ದಲ್ಲಿ ನಾಮ ಫಲಕವು ತಿಳಿ ಹಸಿರು ಬಣ್ಣದಲ್ಲಿರಬೇಕು ಎಂದು ಆರೋಗ್ಯ ಇಲಾಖೆ ನೋಂದಣಿ ನಾಮಫಲಕಕ್ಕೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ. ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ನಾಮಫಲಕ ಕಡ್ಡಾಯಗೊಳಿಸಿರುವ ಕುರಿತಂತೆ ಮಾತನಾಡಿರುವ ಆರೋಗ್ಯ ಸಚಿವರು, ಅರ್ಹತೆ ಹೊಂದಿಲ್ಲದ ಮತ್ತು ನಕಲಿ ವೈದ್ಯರು ಸಮಾಜಕ್ಕೆ ಕಂಟಕವಾಗಿದ್ದು, ರೋಗಿಗಳ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಮತ್ತು ರೋಗಿಗಳ ಸುರಕ್ಷತೆ ಕಾಪಾಡಲು ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *