ಜಲಗಾಂವ್: ಕ್ರಿಕೆಟ್ ದಿಗ್ಗಜ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡೂಲ್ಕರ್ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ(ಗನ್ಮ್ಯಾನ್) ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಮ್ನೇರ್‌ನ ಪ್ರಕಾಶ್ ಕಾಪ್ಡೆ (39) ಸಚಿನ್ ತೆಂಡೂಲ್ಕರ್ ಅವರ ಗನ್ಮ್ಯಾನ್ ಆಗಿ ನಿಯೋಜನೆಗೊಂಡಿದ್ದರು.
ಇತ್ತೀಚೆಗಷ್ಟೇ ಕರ್ತವ್ಯಕ್ಕೆ ರಜೆ ಪಡೆದು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಬುಧವಾರ ಮಧ್ಯರಾತ್ರಿ 1.30ರ ಸುಮಾರಿಗೆ ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪ್ರಕಾಶ್ ಅದಾಗಲೇ ಮೃತಪಟ್ಟಿದ್ದರು.
ಪ್ರಕಾಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.