ಬೆಂಗಳೂರು: ಒಂದೆಡೆ ಮದ್ಯ ಪೂರೈಕೆಗೆ ಅನುಮತಿ ನೀಡಿ ಮತ್ತೊಂದೆಡೆ ಅದೇ ಇಲಾಖೆಯ ಅಧಿಕಾರಿಗಳು ಮಾದರಿ ಚುನಾವಣಾ ನೀತಿಸಂಹಿತೆ ಹೆಸರಲ್ಲಿ ಎರಡು ಟ್ರಕ್‌ಗಳಲ್ಲಿದ್ದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ ಪೇಟೆಯ ಸೋಂಪುರದಲ್ಲಿನ ಕಲ್ಪತರು ಬ್ರಿವರೀಸ್ ಆಯಂಡ್ ಡಿಸ್ಟಿಲರೀಸ್ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಎರಡು ಎಐಆರ್‌ಗಳನ್ನು ರದ್ದುಗೊಳಿಸಿದೆ.
ತಮ್ಮ ಸಂಸ್ಥೆ ವಿರುದ್ಧ ದಾಖಲಾಗಿದ್ದ ಎಐಆರ್ ಪ್ರಶ್ನಿಸಿ ‘ಕಲ್ಪತರು ಬ್ರಿವರೀಸ್ ಆಯಂಡ್ ಡಿಸ್ಟಿಲರೀಸ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ”ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ಮದ್ಯದ ಸಾಗಾಣೆಗೆ ಅಬಕಾರಿ ಇಲಾಖೆಯೇ ಅನುಮತಿ ನೀಡಿ, ಮತ್ತದೇ ಇಲಾಖೆಯ ಅಧಿಕಾರಿಗಳು ಆ ನೀತಿ ಸಂಹಿತೆ ಉಲ್ಲಂಘನೆ ಕಾರಣ ನೀಡಿ ಟ್ರಕ್‌ಗಳಲ್ಲಿ ತುಂಬಿದ್ದ ಮದ್ಯವನ್ನು ವಶಪಡಿಸಿಕೊಳ್ಳುವ ಮೂಲಕ ಕಾನೂನಿನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಎಂಸಿಸಿ (ಚುನಾವಣಾ ನೀತಿ ಸಂಹಿತೆ) ಜಾರಿಯಲ್ಲಿದ್ದಾಗ ಅರ್ಜಿದಾರರ ಕಂಪನಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್ ಬಿಸಿಎಲ್) ಗೆ ಮದ್ಯ ಪೂರೈಸಲು ಅನುಮತಿ ನೀಡಿದ್ದಾದರೂ ಏಕೆ? ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಾಲಯ ಅರ್ಜಿಯನ್ನು ಮಾನ್ಯ ಮಾಡಿ ಎಐಆರ್ ರದ್ದುಗೊಳಿಸಿದೆ.
ಕಾನೂನು ದುರುಪಯೋಗ:
ಒಂದು ವೇಳೆ ಎಐಆರ್ ಒಪ್ಪಿದರೂ, ಅರ್ಜಿದಾರರು ಇನ್‌ವಾಯ್ಸ ಮತ್ತು ಪರ್ಮಿಟ್ ಹೊಂದಿರುವುದರಿಂದ, ಕರ್ನಾಟಕ ಅಬಕಾರಿ ಕಾಯ್ದೆಯ 1965ರ ಸೆಕ್ಷನ್ 32 ಹಾಗೂ 34ರಡಿ ಅಪರಾಧವಲ್ಲ. ಮೇಲ್ನೋಟಕ್ಕೆ ಇದು ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಇಲಾಖೆಯು ಕಾನೂನನ್ನು ದುರುಪಯೋಗ ಮಾಡಿದೆ ಎಂದು ನ್ಯಾಯಪೀಠ ಹೇಳಿದೆ.