ಬೆಂಗಳೂರು: ಲೈಂಗಿಕ ಹಗರಣದಲ್ಲಿ ಸಿಲುಕಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಾಗಲೇ ಮೂರು ಪ್ರತ್ಯೇಕ ಎಐಆರ್ ದಾಖಲಾಗಿದ್ದು, 3ನೇ ಕೇಸಿನಲ್ಲಿ ಕಠಿಣ ಸೆಕ್ಷನ್ ವಿಧಿಸಿರುವುದನ್ನು ಗಮನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಂದರ ಮೇಲೊಂದು ಎಫ್‌ಐಆರ್ ದಾಖಲಾಗುತ್ತಿವೆ.
ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿರುವ 3ನೇ ಎಫ್‌ಐಆರ್‌ನಲ್ಲಿ ಐಪಿಸಿ 376(2), 354(ಎ), 354(ಬಿ), 354(ಸಿ) ಹಾಗೂ 506 ವಿಧಿಸಲಾಗಿದೆ. ಈ ಮೂಲಕ ಪ್ರಜ್ವಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಅಂದರೆ, 376(2)ಅತ್ಯಾಚಾರದ ವೇಳೆ ದೈಹಿಕವಾಗಿ ಘಾಸಿಗೊಳಿಸುವುದು ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ, 354(ಎ) ಲೈಂಗಿಕ ದೌರ್ಜನ್ಯಕ್ಕೆ 3 ವರ್ಷ, 354(ಬಿ) ಮಹಿಳೆಯ ವಿವಸ್ತ್ರಗೊಳಿಸಲು ಬಲಪ್ರಯೋಗ 3 ರಿಂದ 7 ವರ್ಷಗಳವರೆಗೆ ಶಿಕ್ಷೆ, 354(ಸಿ) ಮಹಿಳೆಯ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುವುದು, ವೀಕ್ಷಿಸುವುದು 3 ರಿಂದ 7 ವರ್ಷಗಳವರೆಗೆ ಮತ್ತು 506 ಬೆದರಿಕೆ ಹಾಕುವುದು 7 ವರ್ಷ ಜೈಲು ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ.
ವಿದೇಶದಲ್ಲಿ ಇರುವ ಪ್ರಜ್ವಲ್ ರೇವಣ್ಣ, ಮೇ 15ಕ್ಕೆ ಹಿಂತಿರುಗಲು ವಿಮಾನ ಟಿಕೇಟ್ ಬುಕ್ ಮಾಡಿದ್ದಾರೆ. ಅಲ್ಲಿಯವರೆಗೂ ಬರುವ ಯಾವುದೇ ಸುಳಿವು ಸಿಗುತ್ತಿಲ್ಲ. ಮತ್ತೊಂದೆಡೆ ಭಾರತಕ್ಕೆ ಕರೆತಂದು ಬಂಧಿಸುವ ವಿಚಾರವಾಗಿ ವಿಶೇಷ ತನಿಖಾ ತಂಡ ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿ ಪ್ರಜ್ವಲ್ ಚಲನವಲನದ ಮೇಲೆ ಸದಾ ಕಾಲ ನಿಗಾ ವಹಿಸಿದ್ದಾರೆ. ಮತ್ತೊಂದೆಡೆ ಎಸ್‌ಐಟಿ ಅಧಿಕಾರಿಗಳ ತಂಡವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದೆ. ಇದರ ನಡುವೆ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಕೋರ್ಟ್ ಮೊರೆ ಹೋಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ನ್ಯಾಯಾಂಗ ಬಂಧನ ಮುಂದುವರಿದಿದ್ದು, ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ಕೋರ್ಟ್ ಮುಂದೆ ಬರಲಿದೆ.