September 19, 2024

ಬೆಂಗಳೂರು: ಸೊಸೆಗೆ ವರದಕ್ಷಿಣೆ ಕಿರುಕುಳ ಕೊಟ್ಟು ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಅತ್ತೆ ಹಾಗೂ ಆಕೆಯ ಪುತ್ರಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.
ಈ ಸಂಬಂಧ ದೊಡ್ಡಬಳ್ಳಾಪುರದ ಕೆ.ಎಂ. ಸುನಂದಮ್ಮ ಮತ್ತು ಅವರ ಪುತ್ರಿ ಸೌಮ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿವೆ. ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸಿ ತನಿಖೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: “ಸುನಂದಮ್ಮ ಅವರ ಸೊಸೆ ಚೈತ್ರಾ 2024ರ ಫೆಬ್ರುವರಿ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬ ಹಿನ್ನೆಲೆಯಲ್ಲಿ ಚೈತ್ರಾ ಅವರ ತಾಯಿ ಭಾರತಿ, ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

“ಚೈತ್ರಾಗೆ ಆಕೆಯ ಗಂಡ, ಅತ್ತೆ ಮತ್ತು ನಾದಿನಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಪತಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಬಲವಂತದಿಂದ ಮನೆಯಿಂದ ಹೊರದಬ್ಬಿದ್ದರು. ಹಿತೈಷಿಗಳ ಸಲಹೆ ಮೇರೆಗೆ ಪುನಃ ಮನೆಗೆ ಕರೆದುಕೊಂಡಿದ್ದರು. 2024ರ ಫೆಬ್ರುವರಿ 25ರಂದು ಚೈತ್ರಾ ತನ್ನ ಅಜ್ಜಿಗೆ ಕರೆ ಮಾಡಿ ಆರೋಪಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರು ಮತ್ತು ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಅರ್ಜಿದಾರರ ವಿರುದ್ಧ ಮಹಿಳೆಯ ಮೇಲೆ ಕ್ರೌರ್ಯ ಎಸಗಿದ, ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *