August 18, 2025
IMG_20240504_164323

ಬೆಳಗಾವಿ: ನಗರಾದ್ಯಂತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಸಾರ್ವಜನಿಕರು ಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ನ್ಯೂ ಗಾಂಧಿ ನಗರ ಹಾಗೂ ಉಜ್ವಲ್ ನಗರಗಳಲ್ಲಿ ಬೀದಿ ನಾಯಿಗಳು ಜನರ ಮೈಮೇಲೆ ಎರಗುತ್ತಿದ್ದು ಶ್ವಾನಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾಗಿದೆ.
ಕೆಲಸ ಮುಗಿಸಿ ಮನೆಗೆ ಬರುವವರ ಮೇಲೆ, ಶಾಲೆಯಿಂದ ಮನೆಗೆ ಮರಳುವ ಮಕ್ಕಳ ಮೇಲೆ, ಆಟ ಆಡುತ್ತಿರುವ ಮಕ್ಕಳಮೇಲೆ ನಾಯಿಗಳು ಏಕಾಏಕಿ ಎರಗುವಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಶ್ವಾನಗಳ ದಾಳಿಗೆ ಹೆದರಿ ಬೈಕ್‌ ಸವಾರರು ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ.
ಇದಕ್ಕೆ ನಿದರ್ಶನವೆಂಬಂತೆ ಎರಡು ಬಾಲಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಬಾಲಕರಿಗೆ ತೀವ್ರವಾದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಹೋರಾಟಗಾರ ಸೈಯದ್ ಮನ್ಸೂರ, ನಾಯಿಗಳ ತೊಂದರೆ ಕುರಿತು ಮಹಾನಗರ ಪಾಲಿಕೆ ಆಡಳಿತಕ್ಕೆ ದೂರು ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳು ಹೆಚ್ಚಾಗಿ ಮಹಿಳೆಯರು, ಶಾಲಾ ಮಕ್ಕಳು ಹಾಗೂ ಒಬ್ಬಂಟಿ ಪಾದಚಾರಿಗಳ ಮೇಲೆ ಏಕಾಏಕಿ ದಾಳಿಗೆ ಮುಂದಾಗುತ್ತಿದ್ದು ಭೀತಿ ಹುಟ್ಟಿಸಿದೆ. ದ್ವಿಚಕ್ರ ವಾಹನ ಸವಾರರಿಗೆ ನಾಯಿಗಳು ಯಮ ಸ್ವರೂಪಿಯಾಗಿ ಕಾಡುತ್ತಿದೆ. ಪುರಸಭೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಾಲಕನಿಗೆ ನಾಯಿ ದಾಳಿ ಮಾಡಿದ್ದು, ಬಾಲಕನ ಚಿಕಿತ್ಸೆಯ ವೆಚ್ಚವನ್ನು ಪಾಲಿಕೆ ಅಧಿಕಾರಿಗಳೇ ಭರಿಸಬೇಕೆಂದು ಸೈಯದ್ ಮನ್ಸೂರ ಆಗ್ರಹಿಸಿದ್ದಾರೆ.
ಅಲ್ಲದೆ ಇನ್ನಾದರೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳದಿದ್ದರೇ ಸಾರ್ವಜನಿಕರೇ ಸೇರಿ ನಾಯಿಗಳನ್ನು ಹಿಡಿದು ಕೊಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *