May 18, 2024

ಧಾರವಾಡ: ಲೋಕಸಭಾ ಚುನಾವಣೆ ಇದು ಪ್ರಜಾಪ್ರಭುತ್ವದ ಜಾತ್ರೆ. ನಮ್ಮ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ‌. ಕಾಂಗ್ರೆಸ್ ನಾಯಕರು ಕಪ್ಪುಹಣ ವಿದೇಶದಲ್ಲಿ ಕೂಡಿಟ್ಟಿದ್ದಾರೆ, ಅದನ್ನು ಬಿಜೆಪಿ ಸರಕಾರ ಮರಳಿ ತರುತ್ತೆ ಅಂತ ಹೇಳಿ ಸುಮಾರು ಹತ್ತು ವರ್ಷಗಳು ಕಳೆದವು ಆದರೆ ತಂದಿದ್ದು ಮಾತ್ರ ಸೊನ್ನೆ. ಇಂತಹ ಸುಳ್ಳು ಹೇಳುವ ನಾಯಕರನ್ನು ನಂಬಬೇಡಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ಕುಂದಗೋಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಬೃಹತ್ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಲ್ಹಾದ ಜೋಶಿ ಸುಮಾರು ಇಪ್ಪತ್ತು ವರ್ಷಗಳಿಂದ ಸಂಸದರು. ಆದರೆ ಅವರಿಂದ ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಮಹದಾಯಿ ಕಳಸಾ-ಬಂಡೂರಿ ಯೋಜನೆ ಕಾರ್ಯರೂಪಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂತಹ ಬೇಜವಾಬ್ದಾರಿ ವ್ಯಕ್ತಿಯನ್ನ ಸೋಲಿಸಿ. ನಮ್ಮ ಮರಿ ಟಗರಾದ ವಿನೋದ ಅಸೂಟಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಪಕ್ಷವು ಜನಪರ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿದೆ. ನಮ್ಮ ಗ್ಯಾರಂಟಿಗಳಿಂದ ಜನರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ದೇಶದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿವೆ. ಹಾಗಾಗಿ ಜನರು ಬದಲಾವಣೆ ಬಯಸಿದ್ದು, ಜನಪರ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ. ಜನರ ಸಮಸ್ಯೆಗಳಿಗೆ ಹಾಗೂ ದೇಶದ ಪ್ರಗತಿಗೆ ಕಾಂಗ್ರೆಸ್ ಒಂದೇ ಪರಿಹಾರ. ಹೊಸ ನಾಯಕರು ಪಾರ್ಲಿಮೆಂಟ್‌ ಪ್ರವೇಶಿಸಬೇಕು ಎನ್ನುವ ಉದ್ದೇಶದಿಂದಲೇ ಈ ಬಾರಿ ಹೊಸ ಅಭ್ಯರ್ಥಿಗಳನ್ನು ಚುನಾವಣಾ ಕಣದಲ್ಲಿ ನಿಲ್ಲಿಸಿದ್ದೇವೆ. ನಮ್ಮ ಅಭ್ಯರ್ಥಿಗೆ ಒಂದು ಅವಕಾಶ ಕೊಟ್ಟು ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿ, ನಿಮ್ಮ ಸೇವೆ ಮಾಡುವ ಭಾಗ್ಯ ನೀಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ನುಡಿದಂತೆ ನಡೆದುಕೊಂಡರೆ ಧಾರವಾಡದಲ್ಲಿ ಜೋಶಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಮೊದಲ ನಾಲ್ಕು ಬಾರಿ ಜೋಶಿ ಪ್ರತಿ ಗ್ರಾಮಗಳಿಗೂ ಹೋಗಿ ಪ್ರಚಾರ ಮಾಡಿದ ಉದಾಹರಣೆಯೆ ಇಲ್. ಆದರೆ ಈ ಬಾರಿ ಪ್ರತಿ ಹಳ್ಳಿಗೂ ದಿಲ್ಲಿಯ ಹಾಗೂ ರಾಜ್ಯದ ನಾಯಕರನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ನುಡಿದಂತೆ ನಡೆದ ಸರಕಾರ ಸಿದ್ದರಾಮಯ್ಯನವರ ಸರಕಾರ. ಈ ಬಾರಿ ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಕ್ರಮಸಂಖ್ಯೆ 2ಕ್ಕೆ ಹೆಚ್ಚಿನ ಮತನೀಡಿ ಆಶೀರ್ವದಿಸಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಸಲೀಂ ಅಹಮದ್, ಲೋಕಸಭಾ ಅಭ್ಯರ್ಥಿಯಾದ ಶ್ರೀ ವಿನೋದ ಅಸೂಟಿ, ಕುಂದಗೋಳ ಉಸ್ತುವಾರಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ಶಾಸಕರಾದ ಎನ್ ಎಚ್ ಕೋನರಡ್ಡಿ, ಮಾಜಿ ಶಾಸಕರುಗಳಾದ ಕುಸುಮಾವತಿ ಶಿವಳ್ಳಿ, ಎ ಎಂ ಹಿಂಡಸಗೇರಿ, ಅರವಿಂದ ಕಟಗಿ, ಎಂ ಎಸ್ ಅಕ್ಕಿ, ಮೋಹನ ಲಿಂಬಿಕಾಯಿ, ಅಜೀಮ್ ಪೀರ ಖಾದ್ರಿ ಮತ್ತು ಚಂದ್ರಶೇಖರ್ ಜುಟ್ಟಲ್, ಜಗದೀಶ ಉಪ್ಪಿನ, ಶಿವಾನಂದ ಬೆಂತೂರ, ಷಣ್ಮುಖ ಶಿವಳ್ಳಿ ಹಾಗೂ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಅಧ್ಯಕ್ಷರುಗಳು, ಮಹಿಳಾ ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *