ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರು, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಪ್ರಿಯದರ್ಶಿನಿ ಕಾಲೋನಿ ಹಾಗೂ ಹೆಗ್ಗೇರಿ ನಗರದ ಎರಡು ವಾರ್ಡಗಳ ಮುಖ್ಯ ಬೀದಿಗಳ ಮೂಲಕ ರೋಡ ಶೋ ನಡೆಸಿ ಮತಯಾಚನೆ ಮಾಡಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಪಕ್ಷದ ಜಯಘೋಷಗಳನ್ನು ಕೂಗುತ್ತಾ ಸಾಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯರು 10 ವರ್ಷಗಳ ಆಡಳಿತದಲ್ಲಿ ಜನರಿಗೆ ಸುಳ್ಳು ಹೇಳಿ, ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ, ಜನರ ಭಾವನೆಗಳನ್ನ ಕೆರಳಿಸಿ, ಜಾತಿ-ಧರ್ಮದ ಹೆಸರಿನಲ್ಲಿ, ದ್ವೇಷದ ಹೆಸರಿನಲ್ಲಿ ರಾಜಕೀಯ ಮಾಡಿದ್ದಾರೆ. ಆದಕಾರಣ ಬಿಜೆಪಿಯನ್ನು ಸೋಲಿಸಿ ನನ್ನ ಕ್ರಮಸಂಖ್ಯೆ 2 ಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಬಹಳ ಸಾವುಗಳು ಸಂಭವಿಸುತ್ತಿವೆ ಎನ್ನುವ ವರದಿಗಳು ಬರುತ್ತಿವೆ. ದೇಶದ ಜನರಿಗೆ ಲಸಿಕೆ ನೀಡಿದ ಕಂಪನಿಯೂ ಚುನಾವಣಾ ಬಾಂಡ್ ಹೆಸರಲ್ಲಿ ಬಿಜೆಪಿಗೆ ಲಂಚ ನೀಡಿದೆ. ಈ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ದಿನೇಶ ಗುಂಡುರಾವ್, ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಸದಾನಂದ ಡಂಗನವರ, ಚೇತನ ಹಿರೇಕೆರೂರ, ಪರ್ವೇಜ್ ಕಟ್ಟಿಮನಿ ಹಾಗೂ ಹೆಗ್ಗೇರಿ ನಗರದ ಎರಡು ವಾರ್ಡಗಳ ಮುಖಂಡರು, ಕ್ಷೇತ್ರದ ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.