September 19, 2024

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ‘ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಯನ್ನು ಬಿಡುಗಡೆ ಮಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಜಿ. ಪರಮೇಶ್ವರ, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪಾಲ್ಗೊಂಡಿದ್ದರು .ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ನಾವು ನುಡಿದಂತೆ ನಡೆಯುವ ಜನ. ಭರವಸೆ ನೀಡಿ ಹೋಗುವವರಲ್ಲ.‌ರಾಜ್ಯದ ಜನರಿಗೆ ಮೊದಲಿನಿಂದಲೂ ಏನು ಹೇಳಿದ್ದೇವೋ ಅದನ್ನು ಮಾಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೇ ಬರಲಿದೆ. ನಮ್ಮ ಗುರಿ 150. ಇಷ್ಟು ಸ್ಥಾನಗಳನ್ನ ಗೆದ್ದೇ ಗೆಲ್ಲುತ್ತೇವೆ. ಜನರೇ ನಮ್ಮ ಗ್ಯಾರಂಟಿಗಳ ಬಗ್ಗೆ ಖುಷಿಯಾಗಿ ಮಾತನ್ನಾಡುತ್ತಿದ್ದಾರೆ. ಈಗಾಗಲೇ ಗೃಹಜ್ಯೋತಿ, ಗೃಹಲಕ್ಷಿ, ಅನ್ನಭಾಗ್ಯ, ಯುವನಿಧಿ ಮತ್ತು ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಭರವಸೆಗಳನ್ನು ಘೋಷಿಸಿದ್ದೇವೆ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟ ಸಭೆಯಲ್ಲೇ ಇವುಗಳನ್ನು ಘೋಷಿಸುತ್ತೇವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ಬಗೆಹರಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಭರವಸೆ ನೀಡಿದ್ದೇವೆ. ಎರಡನೇ ಹಂತದ ನಗರಕ್ಕೆ ಜನ ವಲಸೆ ಬರಬಾರದೆಂದು ಅಲ್ಲಿ ಉದ್ಯೋಗ ಸೃಷ್ಟಿ ಮಾಡಲು ಭರವಸೆ ನೀಡಿದ್ದೇವೆ. ಗ್ಲೋಬಲ್ ಕರ್ನಾಟಕ ಎಂದರೆ ಕೇವಲ ಅರ್ಬನ್ ಸೆಕ್ಟರ್ ಮಾತ್ರವಲ್ಲ. ಹಿಂದುಳಿದ ವರ್ಗಗಳ ಸೇರಿದಂತೆ ಎಲ್ಲಾ ವರ್ಗಗಳ ಅಭಿವೃದ್ಧಿ ಕಾಂಗ್ರೆಸ್ ಧ್ಯೇಯ’ ಎಂದು ಡಿ.ಕೆ ಶಿವಕುಮಾರ್ ಮಾತನಾಡಿದರು

ಎಲ್ಲರಿಗೂ ಮೀಸಲಾತಿ ಕೊಡುತ್ತೇವೆ.‌ ಪ್ರಣಾಳಿಕೆ ಮತಗಳಿಕೆಯ ಸಾಧನ ಅಲ್ಲ. ರಾಜ್ಯದ ವಿಕಾಸ, ಜನರ ಅಭಿವೃದ್ಧಿಗೆ ಇರುವ ಸಾಧನ.‌ಐದು ವರ್ಷಗಳ ಅವಧಿಯಲ್ಲಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಳೆದ 2013ರಲ್ಲಿ 165 ಭರವಸೆ ಕೊಟ್ಟಿದ್ದೆವು. ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಕೇವಲ 55 ಭರವಸೆಗಳನ್ನ ಮಾತ್ರ ಈಡೇರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಶೇ 50ರಿಂದ ಶೇ 75ಕ್ಕೆ ಏರಿಕೆ ಮಾಡುತ್ತೇವೆ. ನಾವು ಸಂವಿಧಾನದ ಪ್ರಕಾರವೇ ನಡೆದುಕೊಳ್ಳುವವರು ಎಂದು ಸಿದ್ದರಾಮಯ್ಯ ಮಾತನಾಡಿದರು.

Leave a Reply

Your email address will not be published. Required fields are marked *