ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲಿ ಉಲ್ಬಣಗೊಂಡಿರುವ ವಾತಾವರಣವನ್ನು ಮನಗಂಡು ಪಕ್ಷದ ವರಿಷ್ಠರು ತಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ದಟ್ಟವಾಗಿದೆ.ಹೈ ಕಮಾಂಡ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಪಿ.ಎಫ್.ಪಾಟೀಲ ಅಭಿಮತ ವ್ಯಕ್ತಪಡಿಸಿದರು. ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಟಿಕೇಟ್ ಪ್ರಬಲ ಆಕಾಂಕ್ಷಿ ಪಿ.ಎಫ್. ಪಾಟೀಲ ಅವರ ಅಭಿಮಾನಿ ಬಳಗ ಹಾಗೂ ತಾಲೂಕಿನ ಪಂಚಮಸಾಲಿ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನನ್ನ ಬೆಂಬಲಿಗರು, ಪಕ್ಷದ ಕಾರ್ಯಕರ್ತರೇ ನನ್ನ ಹೈಮಾಂಡ ಇದ್ದಂತೆ ಅವರ ನಿರ್ಣಯದಂತೆ ನಾನು ನಡೆದುಕೊಳ್ಳುತ್ತೇನೆ. ಇನ್ನು ಎರಡು ದಿನಗಳು ಕಾಯಿರಿ, ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಪಕ್ಷದ ಮುಖಂಡರು ಸೂಚನೆ ನೀಡಿದ್ದಾರೆ. ಅವರ ನಿರ್ಣಯ ಹಾಗೂ ಬದಲಾವಣೆಗೆ ಕಾದು ನೋಡೋಣ, ಅಷ್ಟಕ್ಕೂ ವರಿಷ್ಠರು ತಮ್ಮ ನಿಲುವು ಪ್ರಕಟಿಸದೇ ಇದ್ದಲ್ಲಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ. ಕೆ.ವೈ. ಪಾಟೀಲ, ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ ಸೇರಿದಂತೆ ಸರ್ವ ಆಕಾಂಕ್ಷಿಗಳು ಒಂದಾಗಿ ಚರ್ಚಿಸಿ, ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಮ್ಮ ಸ್ಪಷ್ಟ ನಿಲುವು ಪ್ರಕಟಿಸಿದರು.
ಈ ಸಂಧರ್ಭದಲ್ಲಿ ಬಿ.ಎಫ್.ಬಿಸಿಡೋಣಿ, ವೈ.ಎಚ್. ಪಾಟೀಲ, ಶ್ರೀದೇವಿ ಮಾದನ್ನವರ, ಜಿ.ವಿ. ನಾಡಗೌಡ್ರ, ರಾಜೇಶ ಹರ್ಲಾಪೂರ, ಕಲ್ಲಣ್ಣ ವಜ್ರಮಟ್ಟ, ಬಾಳು ಹೊಸಮನಿ, ವಿಜಯ ಗುಡದಾರಿ, ಶಂಕರ ಲಮಾಣಿ, ಬಿ.ಎಲ್. ಸಂಕನಗೌಡ್ರ, ಚೇತನಗಾಣಿಗೇರ, ದೊಡಮನಿ ಸೇರಿದಂತೆ ಇತರರು ಮಾತನಾಡಿ, ಮುಂದಿನ ರಾಜಕೀಯ ಭವಿಷ್ಯದ ಬಗೆಗೆ ಕೂಲಂಕುಶವಾಗಿ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ದುಡುಕು ಸ್ವಭಾವ ಬೇಡವೆಂದರು.