ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ.ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.