ಮಂಗಳೂರು: ಕೆಎಸ್ ಆರ್ ಪಿ ಇನ್‌ಸ್ಪೆಕ್ಟರ್ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಯಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ಹೆಣೆದ ಬಲೆಗೆ ಬಿದ್ದಿದ್ದಾರೆ. ಮಂಗಳೂರಿನಲ್ಲಿ ಈ ಘಟನೆ ವರದಿಯಾಗಿದ್ದು ಕೆಎಸ್ ಆರ್ ಪಿ ಇನ್‌ಸ್ಪೆಕ್ಟರ್ 18,000/- ರೂಪಾಯಿ ಲಂಚ ಪಡೆಯುತ್ತಿದ್ದರು.ಆರೋಪಿ ಇನ್‌ಸ್ಪೆಕ್ಟರ್ ಮೊಹಮ್ಮದ್ ಹ್ಯಾರೀಸ್ ಹಾಗೂ ದೂರು ನೀಡಿದ ಪೊಲೀಸ್ ಕಾನ್‌ಸ್ಟೇಬಲ್ ಶ್ರೀ ಅನಿಲ್ ಕುಮಾರ್ ಕೊಣಾಜೆಯಲ್ಲಿರುವ ಕೆಎಸ್ ಆರ್ ಪಿಯ 7 ನೇ ಬ್ಯಟಾಲಿಯನ್ ಗೆ ಸೇರಿದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ.
ಲೋಕಾಯುಕ್ತ ಮತ್ತು ದೂರುದಾರರ ಪ್ರಕಾರ, ಆರೋಪಿ ಇನ್‌ಸ್ಪೆಕ್ಟರ್, ಪೊಲೀಸ್ ಕಾನ್‌ಸ್ಟೇಬಲ್ ರವರನ್ನು ಪೊಲೀಸ್ ಅತಿಥಿ ಗೃಹದಲ್ಲಿ, ಕೆಲಸ ಮಾಡಲು ಮುಂದುವರೆಸುವುದಕ್ಕಾಗಿ, 20,000/- ರೂಪಾಯಿ ಹಾಗೂ ಮಾಸಿಕ 6,000/- ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ಪ್ರತಿ ತಿಂಗಳು ಇನ್‌ಸ್ಪೆಕ್ಟರ್ ಗೆ 6,000/- ರೂಪಾಯಿ ಲಂಚ ನೀಡುತ್ತಿದ್ದ ಈ ವರೆಗೂ 50,000/- ರೂಪಾಯಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಕಾನ್‌ಸ್ಟೇಬಲ್ ರವರ ತಂದೆಗೆ ಅನಾರೋಗ್ಯ ಇದ್ದ ಕಾರಣ ಕಳೆದ 3 ತಿಂಗಳಿನಿಂದ ಕಾನ್‌ಸ್ಟೇಬಲ್ ರವರು ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಬಾಕಿ ಉಳಿದಿರುವ 18,000/- ರೂಪಾಯಿ ಲಂಚ ನೀಡುವಂತೆ ಮೊಹಮ್ಮದ್ ಹ್ಯಾರೀಸ್ ಪ್ರತಿದಿನ ಪೀಡಿಸುತ್ತಿದ್ದ ಮತ್ತು ಪಾವತಿಸಲು ವಿಫಲವಾದರೆ ಕರ್ತವ್ಯವನ್ನು ಬದಲಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.ಈ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ರವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್ಪಿ ರವರ ನೇತೃತ್ವದ ತಂಡಕ್ಕೆ ಅನಿಲ್ ಕುಮಾರ್ ಅವರಿಂದ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಕರಾರುವಕ್ಕಾಗಿ ನಿಯಮಾನುಸಾರ ಪೊಲೀಸ್ ಸಿಬ್ಬಂದಿಗಳ ಕರ್ತವ್ಯಗಳ ಬದಲಾವಣೆಗಳನ್ನು ಮಾಡದೆ ಇರುವುದು ಈ ಅವಾಂತರಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಾಜ್ಯದ್ಯಂತ ಡಿಎಆರ್, ಸಿಎಆರ್, ಕೆಎಸ್ಆರ್ಪಿ ಇತ್ಯಾದಿ ಪೊಲೀಸ್ ಸಿಬ್ಬಂದಿಗಳು ಜಾಗೃತೆಗೊಂಡು ತಮ್ಮ ಶೋಷಣೆಯ ವಿರುದ್ಧ ದೂರು ನೀಡಲು ಮುಂದಾಗುತ್ತಿರುವುದು ಪೊಲೀಸ್ ಇಲಾಖೆಯಲ್ಲಿ ಪ್ರಜ್ಞಾವಂತರ ಸಂಖ್ಯೆ ಅಧಿಕವಾಗುತ್ತಿದೆ ಎಂಬುದಂತೂ ಸತ್ಯ.
ಕೆಲವು ಪೊಲೀಸರನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಗೌಪ್ಯವಾಗಿ ಕೆಲಸಕ್ಕೆ ಬಾರದ ಯಾವುದು ಯಾವುದಕ್ಕೊ ಕರ್ತವ್ಯಕ್ಕೆ ನಿಯೋಜನೆ ಮಾಡಿರುವಂತೆ ತೋರಿಸಿಕೊಂಡು ಅವರ ವೇತನದಲ್ಲಿ ಕಮಿಷನ್ ಪಡೆದು ಅಧಿಕಾರಿಗಳು ತಮ್ಮ ಭ್ರಷ್ಟಾಚಾರಕ್ಕೆ ಸಿಬ್ಬಂದಿಗಳನ್ನು ಬಲಿಪಶು ಮಾಡುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಆದ್ದರಿಂದ ಇದಕ್ಕೆ ಇರುವ ಒಂದೇ ಪರಿಹಾರವೆಂದರೆ, ಪೊಲೀಸ್ ಸಿಬ್ಬಂದಿಗಳ ನಾಳಿನ ಕರ್ತವ್ಯವನ್ನು ಒಂದು ದಿನ ಮುಂಚಿತವಾಗಿ ನೋಟಿಸ್ ಬೋರ್ಡಿನಲ್ಲಿ ಅಂಟಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಲ್ಲಿ ಮಾತ್ರವೇ ಸಾಧ್ಯ, ವ್ಯವಸ್ಥೆಯು ಪಾರದರ್ಶಕತೆಯನ್ನು ಕಾಪಾಡಿಕೊಂಡು ಹೋಗುವಂತಾಗಲಿ ಎಂದು ಕೋರಿ ದಯಾಳುಗಳಲ್ಲಿ ಪ್ರಾರ್ಥನೆ ಸ್ವಾಮಿ.