November 21, 2024

ನೆಗ್ಗೇರಿಯಾ ಫೌಲೇರಿ ಎಂಬ ಅಮೀಬಾ, ಮನುಷ್ಯನ ಮೂಗಿನ ಮೂಲಕ ಒಳಹೋಗಿ ಮೆದುಳಿಗೆ ತಲುಪಿ ಕೊನೆಗೆ ಜೀವವನ್ನೇ ಕಸಿದುಕೊಳ್ಳುವಂತಹ ಕಾಯಿಲೆ ಇದು. ಹೌದು_ ಅಮೀಬಿಕ್ ಮೆನಿಂಗೋ ಎನ್ಸೆಫಲಿಟಿಸ್‌ ಹೆಸರಿನ ಅಪರೂಪದ, ಆದರೆ ಅಷ್ಟೇ ಅಪಾಯಕಾರಿಯಾದ ಮಾರಣಾಂತಿಕ ಕಾಯಿಲೆ ಕೇರಳ ರಾಜ್ಯವನ್ನು ಬಾಧಿಸತೊಡಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಪಯ್ಯೋಳಿ ಎಂಬಲ್ಲಿ 14 ವರ್ಷದ ಹುಡುಗ ಈಗ ಎರಡು ದಿನಗಳ ಹಿಂದಷ್ಟೇ ಇದಕ್ಕೆ ಬಲಿಯಾಗಿದ್ದಾನೆ. ಮೇ ತಿಂಗಳಿಂದೀಚೆಗೆ ಕೇರಳದಲ್ಲಿ ಇಂತಹ ನಾಲ್ಕನೇ ಸಾವು ಇದು. ಸತ್ತವರೆಲ್ಲರೂ ಸಣ್ಣ ವಯಸ್ಸಿನವರೇ ಎಂಬುದು ಗಮನಾರ್ಹ.

ಕೇರಳದಲ್ಲಿರುವ ಪ್ರಕೃತಿ- ಪರಿಸರ-ವಾತಾವರಣ ಈ ನೆಗ್ಗೇರಿಯಾ ಫೌಲೇರಿ ಅಮೀಬಾಗೆ ಹೇಳಿ ಮಾಡಿಸಿದಂತಿದೆ. ಕೆಲವೊಮ್ಮೆ ಅತಿಯಾದ ಉಷ್ಣತಾಮಾನ, ಮತ್ತೆ ಕೆಲವೊಮ್ಮೆ ತೀವ್ರ ಆದ್ರ್ರತೆ ಇರುವಂತಹ ಪ್ರದೇಶಗಳಲ್ಲಿ ಈ ಅಮೀಬಾ ಬೆಳೆಯುತ್ತದೆಯಂತೆ. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ಇದರ ಹಾವಳಿ ಹೆಚ್ಚು, ಕೆರೆಕಟ್ಟೆ, ಸರೋವರ, ನದಿ ಪಾತ್ರಗಳಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾಗುತ್ತದೆ. ಕೆಲವೆಡೆ ನಿಂತ ನೀರು ಹಲವಾರು ದಿನಗಳ ಅಲ್ಲೇ ನಿಂತಿರುತ್ತದೆ. ಹರಿದರೂ ನಿಧಾನವಾಗಿ ಹರಿಯುತ್ತಿರುತ್ತದೆ. ಇದೆಲ್ಲದರ ಪರಿಣಾಮವಾಗಿ ಈ ಅಪಾಯಕಾರಿ ಅಮೀಬಾ ಅಲ್ಲಿ ತನ್ನ ಸಂತಾನವನ್ನು ವೃದ್ಧಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿನ ಜನರು ಇಂತಹ ನೀರಿನಲ್ಲಿ ಸ್ನಾನ ಮಾಡುವುದು, ಈಜಾಡುವುದು, ಮುಖ ತೊಳೆಯುವುದು, ಬಟ್ಟೆ ಒಗೆಯುವುದು ಹೆಚ್ಚು, ಅವರೇ ಈ ಅಮೀಬಾದ ಸಂಪರ್ಕಕ್ಕೆ ಬರುವ ಸಾಧ್ಯತೆ ಇರುತ್ತದೆ

ಈ ಅಪಾಯಕಾರಿ ಅಮೀಬಾ ಹರಡುವುದನ್ನು ತಡೆಯಬೇಕೆಂದರೆ ನೀರು ಬಹುಕಾಲ ಒಂದೇ ಕಡೆ ನಿಲ್ಲುವುದನ್ನು ತಪ್ಪಿಸಬೇಕು. ಜಲ ಮೂಲಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆಗಾಗ ಕ್ಲೋರಿನ್ ಹಾಕಬೇಕು. ಕಲುಷಿತ ನೀರಿನಲ್ಲಿ ಮುಖ ತೊಳೆಯುವುದು, ಬಟ್ಟೆ ಒಗೆಯುವುದು, ಈಜಾಡುವುದನ್ನು ತಪ್ಪಿಸಬೇಕು. ಆಗ ಮಾತ್ರ ಈ ಅಮೀಬಾದ ಸೋಂಕಿಗೆ ಒಳಗಾಗುವುದರಿಂದ ಬಚಾವಾಗಲು ಸಾಧ್ಯ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರಗಳು. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರೆಲ್ಲರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *