
ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಿಂದ ಸಂಗ್ರಹವಾಗುವ ಸೆಸ್ ಹಣವನ್ನು ಕಾರ್ಮಿಕರ ಕಲ್ಯಾಣ ಮತ್ತು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾದ ಹಣವನ್ನು ಶೈಕ್ಷಣಿಕ ಧನಸಹಾಯಕ್ಕೆ ಖರ್ಚು ಮಾಡಬೇಕೇ ವಿನಃ ಮಂಡಳಿಯ ಅಧಿಕಾರಿಗಳ ಐಷಾರಾಮಿ ಓಡಾಟಕ್ಕಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿ, ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್’ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹಾಗೂ ಇತರ ಮೂವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಕಲ್ಯಾಣ ಮಂಡಳಿಯು ಈಗಾಗಲೇ 6 ಲಕ್ಷ ವಿದ್ಯಾರ್ಥಿಗಳಿಗೆ ₹500 ಕೋಟಿ ಶೈಕ್ಷಣಿಕ ಸಹಾಯಧನ ವಿತರಿಸಿದೆ. ಕಟ್ಟಡ ಕಾರ್ಮಿಕರಿಗಾಗಿ ಮಂಡಳಿಯ ಮುಖಾಂತರ ಇನ್ನೂ 19 ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ’ ಎಂದರು.
ಈಗಾಗಲೇ ಮಂಡಳಿಯು ಅನುಮೋದನೆ ಮೂಲಕ ಇನ್ನೋವಾ ಕಾರುಗಳನ್ನು ಖರೀದಿಸಿದ್ದು, ಮಂಡಳಿಯ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡಿದೆ. ಹೈಕೋರ್ಟ್ ಇದೇ ಪೀಠವು ನೀಡಿದ್ದ ಮಧ್ಯಂತರ ಆದೇಶದಂತೆ ಇಬ್ಬರು ವಿದ್ಯಾರ್ಥಿನಿಯರಿಗೆ ಇನ್ನೂ ಹಣ ಪಾವತಿ ಮಾಡಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಈ ಹಿಂದಿನ ಅಂದರೆ 2024ರ ಏಪ್ರಿಲ್ 23ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ನಾಲ್ಕು ವಾರದೊಳಗೆ ಎಲ್.ಎಲ್.ಬಿ ಹಾಗೂ ಎಂ.ಬಿ.ಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಅರ್ಜಿದಾರ ವಿದ್ಯಾರ್ಥಿನಿಯರಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು’ ಎಂದು ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಗೆ ಆದೇಶಿಸಿದ್ದರು.
ಈ ಕುರಿತಂತೆ ನ್ಯಾಯಪೀಠಕ್ಕೆ ಸ್ಪಷ್ಟನೆ ನೀಡಿದ ಕಲ್ಯಾಣ ಮಂಡಳಿ ಪರ ವಕೀಲರು, ‘ಇಬ್ಬರು ವಿದ್ಯಾರ್ಥಿನಿಯರಿಗೆ ಕೋರ್ಟ್ ಆದೇಶದ មថ ₹60,000 ₹55,000 ಪಾವತಿಸಲಾಗಿದೆ’ ಎಂದು ಪಾವತಿ ರಸೀ ನಕಲನ್ನು ನೀಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.