ಕೇವಲ ಮೂರು ದಿನದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 60 ಮದುವೆಯಾಗುವ ಮೂಲಕ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಇಲ್ಲೊಬ್ಬ ಮಹಿಳೆ ಅಕ್ಷರಶಃ ಸುಳ್ಳು ಮಾಡಿದ್ದಾಳೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೂ ಗುರಿಯಾಗಿದ್ದಾಳೆ. ಆಸ್ಟ್ರೇಲಿಯಾ ಮೂಲದ ಕಾರ್ಲಿ ಸಾರಿ ಹೆಸರಿನ 40 ವರ್ಷದ ಮಹಿಳೆ ವೃತ್ತಿಯಲ್ಲಿ ಮದುವೆಯ ಫೋಟೋಗ್ರಾಫರ್ ಆಗಿದ್ದು, ಕಳೆದ ಮೂರು ದಿನಗಳ ಮದುವೆ ಸಮಾರಂಭದಲ್ಲಿ ಒಟ್ಟು 60 ಮಂದಿಯನ್ನು ವಿವಾಹವಾಗಿದ್ದಾರೆ. ಅಂದಹಾಗೆ ಕಾರ್ಲಿ ಸಾರಿ ಕೇವಲ ಪುರುಷರನ್ನು ಮಾತ್ರವಲ್ಲದೆ ಮಹಿಳೆಯರನ್ನೂ ಮದುವೆಯಾಗಿದ್ದಾಳೆ. ಈ ಸಂಗತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಭಾರಿ ಟೀಕೆಗಳಿಗೂ ಕ್ಯಾರೆ ಎನ್ನದ ಕಾರ್ಲಿ ಸಾರಿ, ತನ್ನ ನಿರ್ಧಾರದ ಬಗ್ಗೆ ತನಗೆ ಹೆಮ್ಮೆ ಇದೆ ಎನ್ನುವ ಮೂಲಕ ಟೀಕಿಸುವವರಿಗೆ ತಿರುಗೇಟು ನೀಡಿದ್ದಾಳೆ. ಮದುವೆಯಾದ ಎಲ್ಲರು ನನ್ನ ಜೀವನದಲ್ಲಿ ತುಂಬಾ ಮುಖ್ಯ ಎಂದು ಹೇಳಿದ್ದಾಳೆ. ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕಾರ್ಲಿ ಸಾರಿಯ ಕೋರಿಕೆಯಂತೆ, ಅವಳನ್ನು ಮದುವೆಯಾಗಲು ಉದ್ದೇಶಿಸಿರುವ 60 ಜನರು ಮಾತ್ರ ಮದುವೆಗೆ ಹಾಜರಾಗಿದ್ದರು. ಮೂರು ದಿನಗಳು ಕಾಲ ನಡೆದ ಸಮಾರಂಭದಲ್ಲಿ 60 ಜನರನ್ನು ಆಕೆ ಮದುವೆಯಾದಳು. ತನಗೆ ಒಬ್ಬ ಜೀವನ ಸಂಗಾತಿ ಸಾಕಾಗಲ್ಲ ಮತ್ತು ಒಬ್ಬನಿಗೆ ಮಾತ್ರ ತನ್ನ ಜೀವನವನ್ನು ಮುಡಿಪಾಗಿಡಲು ಬಯಸುವುದಿಲ್ಲ. ಅದಕ್ಕಾಗಿಯೇ 60 ಜನರನ್ನು ಮದುವೆಯಾಗಿದ್ದೇನೆ ಎಂದು ಕಾರ್ಲೆ ಸಾರಿ 60 ಜನರನ್ನು ಮದುವೆಯಾಗಲು ಹಿಂದಿರುವ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.