ಬ್ರಿಡ್ಜ್ಟೌನ್: ಟಿ20 ವಿಶ್ವಕಪ್ನ ಫೈನಲ್ ಪಂದ್ಯವನ್ನ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಚಾಂಪಿಯನ್ ಆಗಿ ಹೊರಹೊಮ್ಮಿದೆ. 2013 ರಲ್ಲಿ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 5 ರನ್‌ಗಳಿಂದ ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಟ್ರೋಫಿಯ ಬಳಿಕ ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ ಒಂದೇ ಒಂದು ಟ್ರೋಫಿಯನ್ನು ಗೆದ್ದುಕೊಂಡಿಲ್ಲ.
ಅದರಲ್ಲೂ ಕಳೆದ 12 ತಿಂಗಳಿನಲ್ಲಿ ಭಾರತ ಮೂರು ಬಾರಿ ಫೈನಲ್ ಪ್ರವೇಶಿಸಿತ್ತು. ಕಳೆದ ವರ್ಷದ ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲಿನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ನಂತರ ಭಾರತದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋತಿತ್ತು. ಆದರೆ ಮೂರನೇ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ಈ ಬಾರಿ ಟಿ20 ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಕೊನೆ 5 ಓವರ್ಗಳಲ್ಲಿ ಸೌತ್ ಆಫ್ರಿಕಾ ಗೆಲುವಿಗೆ 29 ರನ್ ಬೇಕಿತ್ತು. ಹರಿಣಗಳನ್ನ ಕಟ್ಟಿಹಾಕಲು ರೋಹಿತ್ ಪಡೆ ಸಕ್ಸಸ್ ಆಗಿದೆ. ಪರಿಣಾಮ 20 ಓವರ್ಗಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ಗಳಿಸಲಷ್ಟೇ ಶಕ್ತವಾಯ್ತು. 7 ರನ್ಗಳ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತು. ಇದರೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸು ನನಸು ಮಾಡ್ತು. ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು.