November 21, 2024

ಹುಬ್ಬಳ್ಳಿ ಜೂ.29: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮಹಾಪೌರರಾಗಿ 30ನೇ ವಾರ್ಡ್ ಸದಸ್ಯರಾದ ರಾಮಪ್ಪ ಬಡಿಗೇರ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಆಯ್ಕೆಯಾದರು. ಪಾಲಿಕೆಯ 69ನೇ ವಾರ್ಡ್ ಸದಸ್ಯೆಯರಾದ ದುರ್ಗಮ್ಮ ಬಿಜವಾಡ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಉಪ ಮಹಾಪೌರರಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿಯಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಪ್ರಕಟಿಸಿದರು.

ಮಹಾಪೌರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾನಗರ ಪಾಲಿಕೆಯ 33ನೇ ವಾರ್ಡ್ ಸದಸ್ಯರಾದ ಇಮಾಮ್ ಹುಸೇನ ಎಲಿಗಾರ ಅವರು 36 ಮತಗಳನ್ನು ಮತ್ತು ಮಹಾನಗರ ಪಾಲಿಕೆಯ 77 ನೇ ವಾರ್ಡ್ ಸದಸ್ಯೆಯರಾದ ಹುಸೇನಬಿ ನಾಲತವಾಡ ಅವರು 3 ಮತಗಳನ್ನು ಪಡೆದುಕೊಂಡಿದ್ದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23 ನೇ ಅವಧಿಗೆ ಉಪಮಹಾಪೌರರಾಗಿ ಪಾಲಿಕೆಯ 69ನೇ ವಾರ್ಡ್ ಸದಸ್ಯೆಯರಾದ ದುರ್ಗಮ್ಮ ಬಿಜವಾಡ ಅವರು ಅತಿ ಹೆಚ್ಚು (47) ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿದ್ದಾರೆ ಎಂದು ಅವರು ತಿಳಿಸಿದರು. ಉಪಮಹಾಪೌರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾನಗರ ಪಾಲಿಕೆಯ 50ನೇ ವಾರ್ಡ್ ಸದಸ್ಯೆಯರಾದ ಮಂಗಳಮ್ಮ ಹಿರೇಮನಿ ಅವರು 36 ಮತಗಳನ್ನು ಪಡೆದಿದ್ದಾರೆ ಎಂದು ಅವರು ಪ್ರಕಟಿಸಿದರು. ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 86 ಜನರು ಪಾಲ್ಗೊಂಡಿದ್ದರು. ನಾಲ್ಕು ಜನ ಸದಸ್ಯರು ಗೈರು ಹಾಜರಾಗಿದ್ದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *