ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಯಿಂದ ₹50 ಸಾವಿರ ಹಾಕಿಸಿಕೊಂಡು, ವಂಚಿಸಿದ ಆರೋಪದ ಮೇಲೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಸ್ವೀಪರ್ ಕೆಲಸ ಮಾಡುವ ಸಿಬ್ಬಂದಿ ರಾಜು ಕೃಷ್ಣಪ್ಪ ಅರಮನಿ ಎಂಬಾತನಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಕಾರಾಗೃಹ ವಾಸ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
2014ರಲ್ಲಿ ಇಲ್ಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ಅಶೋಕ ಭಟ್ಟ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ಪ್ರಕರಣವನ್ನು ದುರುಪಯೋಗಪಡಿಸಿಕೊಂಡು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆಗಿದ್ದ ಮುರುಗೇಶ ಕುಂಬಾರ,
ತಾನೇ ಲೋಕಾಯುಕ್ತ ಅಧಿಕಾರಿ ಎಂದು ಎಸಿಎಫ್ ಅಶೋಕ ಭಟ್ಟ ಅವರಿಗೆ ಸುಳ್ಳು ಹೇಳಿ, ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು ₹ 50 ಸಾವಿರ ಬೇಡಿಕೆ ಇಟ್ಟು, ಹಣ ಪಡೆದುಕೊಂಡಿದ್ದ. ಆಗಿನ ಸಿಪಿಐ ಹುಸೇನಖಾನ ಪಠಾಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸಾದ ರಮೇಶ ಹೆಗಡೆ ವಾದ ಮಂಡಿಸಿದ್ದರು.