November 19, 2024

(c)PragMatrix

ಮದ್ರಾಸ್: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಒಮ್ಮೆ ನಡೆದಿದ್ದರೂ ಕೂಡ ಅದು ಗಂಭೀರ ಸ್ವರೂಪದ್ದಾಗಿದ್ದು ಸಂತ್ರಸ್ತರ ಮನಸ್ಸಿನಲ್ಲಿ ಸದಾ ಆಘಾತ ಮತ್ತು ಭಯ ಉಂಟುಮಾಡುತ್ತಿದ್ದರೆ ಅಂತಹ ಕೃತ್ಯವನ್ನು  ನಿರಂತರ ಅಪರಾಧವೆಂದೇ ಪರಿಗಣಿಸಬೇಕು ಎಂದು ಈಚೆಗೆ ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಆದ್ದರಿಂದ ಅಂತಹ ಅಪರಾಧವನ್ನು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ [ಪಿಒಎಸ್‌ಎಚ್‌- ಪೋಷ್‌ ಕಾಯಿದೆ] ಸೆಕ್ಷನ್ 9ರ ಅಡಿ ಆರು ತಿಂಗಳ ಅವಧಿಗಷ್ಟೇ ಸೀಮಿತಗೊಳಿಸಬಾರದು ಎಂದು ನ್ಯಾಯಾಲಯ ನುಡಿದಿದೆ.

ಕೆಲಸದ ಸ್ಥಳದಲ್ಲಿ ನಡೆಯುವ ಬಹುತೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದೂರು ನೀಡಿ ಅಪಾಯ ಎದುರಿಸಬೇಕೆ? ತನ್ನ ಸುತ್ತಲೂ ಇರುವವರಿಂದ ದ್ವಿತೀಯ ಸಂತ್ರಸ್ತರಾಗಿ (ಕೃತ್ಯದ ನೇರ ಸಂತ್ರಸ್ತರಾಗಿರದೆ ಪ್ರಾಥಮಿಕ ಸಂತ್ರಸ್ತರು ಅನುಭವಿಸಿದ ಸಂಕಷ್ಟಗಳಿಂದ ಮಾನಸಿಕ ಯಾತನೆ ಅನುಭವಿಸುವವರು) ಇರಬೇಕೆ ಇಲ್ಲವೇ ಅಂತಹ ದೂರು ನೀಡದೆ ಬದುಕಬೇಕೆ ಎಂಬ ಬಗ್ಗೆ ದೂರುದಾರರು ಸಂದಿಗ್ಧತೆ ಎದುರಿಸುತ್ತಾರೆ ಎಂದು ಜೂನ್ 11ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರು ತಿಳಿಸಿದ್ದಾರೆ.

ಪೋಷ್‌ ಕಾಯಿದೆ ಅಡಿಯಲ್ಲಿ ಆಂತರಿಕ ದೂರುಗಳ ಸಮಿತಿ (ICC) ಎದುರು ಔಪಚಾರಿಕ ದೂರು ಸಲ್ಲಿಸಲು ಮತ್ತು ಸಾಕ್ಷ್ಯ ನೀಡಲು ದೂರುದಾರರಿಗೆ ಧೈರ್ಯ ಮೂಡಲು ಬಹಳಷ್ಟು ಸಮಯ ಹಿಡಿಯಬಹುದು. ಈ ಪ್ರಕ್ರಿಯೆಯಲ್ಲಿ, ದೂರುದಾರರು ಲೈಂಗಿಕ ಕಿರುಕುಳದ ಘಟನೆಯ ನಂತರವೂ ಬಳಲುತ್ತಲೇ ಇರುತ್ತಾರೆ. ಆದ್ದರಿಂದ ಅಪರಾಧ ಗಂಭೀರ ಸ್ವರೂಪದ್ದಾಗಿದ್ದು ಸಂತ್ರಸ್ತರ ಮನಸ್ಸಿನಲ್ಲಿ ನಿರಂತರ ಆಘಾತ ಮತ್ತು ಭಯ ಉಂಟುಮಾಡುತ್ತಿದ್ದರೆ ಅಂತಹ ಕೃತ್ಯವನ್ನು ನಿರಂತರ ಅಪರಾಧವೆಂದೇ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Leave a Reply

Your email address will not be published. Required fields are marked *