ಮಕ್ಕಳು ದೇವರ ಸಮಾನ ಅಂತಾರೆ.. ಆದ್ರೆ ಇಲ್ಲೊಬ್ಬ ದುರುಳ ದೇವರ ಸನ್ನಿಧಿಯಲ್ಲೇ ಬಾಲಕನ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಮಸೀದಿಯೊಂದರ ಆವರಣದಲ್ಲಿ 11 ವರ್ಷದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಹೊಟ್ಟೆಗೆ ಜಾಡಿಸಿ ಒದ್ದು ಪಾಪಿಯೋರ್ವ ರಾಕ್ಷಸಿ ಕೃತ್ಯವೆಸಗಿದ್ದಾನೆ. ಪಾಪಿಯ ಕ್ರೌರ್ಯ ಮಸೀದಿಯೊಳಗಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರದ ತಹಶಿಲ್ದಾರ್ ಪ್ಲಾಟ್‌ನಲ್ಲಿರುವ ನೂರಾಣಿ ಮಸೀದಿಯಲ್ಲಿ ಜೂನ್ 6ರಂದು ಈ ಘಟನೆ ನಡೆದಿದ್ದು ಸದ್ಯ ಸಿಸಿ ಕ್ಯಾಮರಾ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಪ್ಪಾಣಿಯ ತಹಶಿಲ್ದಾರ್ ಪ್ಲಾಟ್ ನಿವಾಸಿ 42 ವರ್ಷದ ಇಸ್ಮಾಯಿಲ್ ಗಫರ್ ಮುಲ್ಲಾ ಎಂಬಾತ ತನ್ನ ಮಗನ ಜೊತೆ ಏಕೆ ಜಗಳವಾಡುತ್ತಿಯಾ ಎಂದು ಪ್ರಶ್ನಿಸಿ 12 ವರ್ಷದ ಪುಟ್ಟ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪಾಪಿಯ ಥಳಿತದಿಂದ ಬಾಲಕ ನೆಲಕ್ಕುರುಳಿದರೂ ಸುಮ್ಮನಾಗದ ಇಸ್ಮಾಯಿಲ್ ಬಾಲಕನ ಹೊಟ್ಟೆ ಮೇಲೆ ಜಾಡಿಸಿ ಒದ್ದು ರಾಕ್ಷಸಿ ಕೃತ್ಯ ಎಸಗಿದ್ದಾನೆ. ಗಾಯಗೊಂಡು ಮನೆಗೆ ತೆರಳಿದ್ದ ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಪೋಷಕರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಇಸ್ಮಾಯಿಲ್ ಗಫರ್ ಮುಲ್ಲಾ ವಿರುದ್ಧ ನಿಪ್ಪಾಣಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದ್ದು ಬಾಲಕನ ಮೇಲೆ ರಾಕ್ಷಸಿ ಕೃತ್ಯವೆಸಗಿದ ಆರೋಪಿಗೆ ಕಠಿಣ ಶಿಕ್ಷೆಗೊಳಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.