November 22, 2024

ಹುಬ್ಬಳ್ಳಿ : ಸ್ಥಳೀಯ ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ದಿ. ಹಿಂದು ಪತ್ರಿಕೆಯ ವಿಶ್ರಾಂತ ಹಿರಿಯ ಪತ್ರಕಕರ್ತ ದಿ. ಮತ್ತಿಹಳ್ಳಿ ಮದನಮೋಹನ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತರಾಗಿದ್ದ ಮತ್ತಿಹಳ್ಳಿ ಮದನಮೋಹನ ಅವರಲ್ಲಿ ಪತ್ರಿಕೋದ್ಯಮದ ವೃತ್ತಿಬದ್ಧತೆ ಇತರರಿಗೆ ಮಾದರಿಯಾಗಿತ್ತು. ಅವರು ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದರು. ಅಪಾರ ಜ್ಞಾನ ಹೊಂದಿದ್ದರು. ನಾಡಿನ ಸಮಸ್ಯೆಗಳ ಬಗ್ಗೆ ಮತ್ತು ಜಲಸಂಪನ್ಮೂಲ ಹಾಗೂ ಪಂಚಾಯತ ರಾಜ್ ಮೊದಲಾದ ಸಂಗತಿಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದು, ವರದಿಗಳ ಮೂಲಕವೇ ಸರಕಾರಕ್ಕೆ ಮಾರ್ಗದರ್ಶನ ಮಾಡಿದ್ದರು.

ಅತ್ಯಂತ ಪ್ರಾಮಾಣಿಕ ಪತ್ರಕರ್ತರಾಗಿದ್ದು, ಅವ್ಯಾಹತವಾಗಿ ೪೭ ವರ್ಷಗಳ ಕಾಲ ವರದಿಗಾರರಾಗಿ ಕೆಲಸ ಮಾಡಿದ್ದರು. ಸುದ್ದಿ ಮಾಡುವ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಇತ್ತೀಚೆಗೆ ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದರು ಎಂದು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡವರಿAದ ಅವರ ಕುರಿತಂತೆ ಒಡನಾಟ ಮತ್ತು ಅಭಿಪ್ರಾಯಗಳು ವ್ಯಕ್ತವಾದವು.  ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಡಾ. ಬಂಡು ಕುಲಕರ್ಣಿ, ಪ್ರಜಾವಾಣಿಯ ರಾಹುಲ್ ಬೆಳಗಲಿ, ಸಂಘದ ಉಪಾಧ್ಯಕ್ಷ ರಾಜು ವಿಜಾಪುರ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಗಿರೀಶ ಪಟ್ಟಣಶೆಟ್ಟಿ, ಅಬ್ಬಾಸ ಮುಲ್ಲಾ, ಸಂಗಮೇಶ ಮೆಣಸಿನಕಾಯಿ ಮಾತನಾಡಿ, ತಮ್ಮ ನುಡಿನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿ, ತಮ್ಮೊಂದಿಗಿನ ಒಡನಾಟಗಳನ್ನು ಮೆಲಕು ಹಾಕಿದರಲ್ಲದೇ ಹಿರಿಯ ಪತ್ರಕರ್ತ ದಿ. ಮದನ ಮೋಹನ ಅವರ ಕುರಿತಂತೆ ಶೀಘ್ರದಲ್ಲೇ ಸಾರ್ವಜನಿಕ ಹಾಗೂ ಅವರೊಂದಿಗಿನ ಒಡನಾಟದವರನ್ನು ಸೇರಿಸಿ ವಿಸ್ತೃತವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.  ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ, ಕಾರ್ಯದರ್ಶಿ ಡಾ. ವೀರೇಶ ಹಂಡಿಗಿ, ಗಿರೀಶ ಕುಲಕರ್ಣಿ, ಯಲ್ಲಪ್ಪ ಸೋಲಾರಗೊಪ್ಪ, ಮಂಜುನಾಥ ಜರತಾರಘರ, ಪ್ರಕಾಶ ಚಳಗೇರಿ ನವೀನ ಸೋಲಾರಗೊಪ್ಪ ಇತರರು ಪಾಲ್ಗೊಂಡಿದ್ದರು. ನಂತರ ಒಂದು ನಿಮಿಷ ಮೌನಾಚರಣೆ ನಂತರ ದಿ. ಮದನಮೋಹನ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಲಾಯಿತು.

Leave a Reply

Your email address will not be published. Required fields are marked *