ವಿವಾಹಿತ ಮಹಿಳೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಪತಿ, ಅತ್ತೆ- ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯ ಆರೋಪದಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ವಿವಾಹಿತ ಮಹಿಳೆ ಮೇಲೆ ಪತಿ ಹಾಗೂ ಮತ್ತವರ ಸಂಬಂಧಿಕರು ಕೌಟುಂಬಿಕ ದೌರ್ಜನ್ಯ ಎಸಗುವುದನ್ನು ತಡೆಯುವ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 498(ಎ) ಕಾಯ್ದೆಯ ದುರುಪಯೋಗ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಅಂತಹ ಪ್ರಕರಣಗಳನ್ನು ಬೇರುಸಮೇತ ಕಿತ್ತುಹಾಕಬೇಕು ಎಂದು ಅಭಿಪ್ರಾಯಪಟ್ಟಿದೆ.
ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯ ಎಸಗಿದ್ದಾರೆ ಎಂದು ಆರೋಪಿಸಿ ಸೊಸೆ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ತುಮಕೂರಿನ ಸಿ.ಬಿ.ಪ್ರಕಾಶ್ ಹಾಗೂ ಅವರ ಪತ್ನಿ ಎಸ್.ಬಿ.ತ್ರಿವೇಣಿ ಸಲ್ಲಿಸಿದ್ದ ಅರ್ಜಿ ಮಾನ್ಯಮಾಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಕುರಿತಂತೆ ಆದೇಶಿಸಿದೆ.
ಈ ಪ್ರಕರಣದಲ್ಲಿ ಎರಡನೇ ಹಾಗೂ ಮೂರನೇ ಆರೋಪಿಗಳಾಗಿದ್ದ ಅರ್ಜಿದಾರರು ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು ದೂರುದಾರ ಮಹಿಳೆಯ ಅತ್ತೆ-ಮಾವನಾಗಿದ್ದು ಇವರ ವಿರುದ್ಧ ಯಾವುದೇ ನಿರ್ಧಿಷ್ಟ ಆರೋಪಗಳಿಲ್ಲ. ಅತ್ತೆ-ಮಾವನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ದೂರುದಾರೆ ವಿಫಲರಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನಿನ ಉಲ್ಲಂಘನೆ ಆಗುತ್ತದೆ ಎಂದು ನ್ಯಾಯಪೀಠ ಹೇಳಿದ್ದು, ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ. ಹಾಗೂ ಪತಿ,ಅತ್ತೆ-ಮಾವನ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.