November 22, 2024

ಮಕ್ಕಳ ಮಾರಾಟ ಪ್ರಕರಣದ ಆರೋಪಿ, ನಕಲಿ ವೈದ್ಯ ಅಬ್ದುಲ್​ ಗಫಾರ್​ ಲಾಡಖಾನ್​ ಭ್ರೂಣ ಹತ್ಯೆ (Feticide) ಮಾಡುತ್ತಿದ್ದ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ಸೂಚನೆ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ, ಎಫ್​ಎಸ್​ಎಲ್ ತಂಡ ಇಂದು (ಜೂ.16) ಕಿತ್ತೂರು (Kittur) ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿಯ ನಕಲಿ ವೈದ್ಯನ ಫಾರ್ಮ್​ಹೌಸ್​​​​ ಪರಿಶೀಲಿಸಿತು. ಅಬ್ದುಲ್​ ಗಫಾರ್​ ಲಾಡಖಾನ್ ಫಾರ್ಮ್​​ ಹೌಸ್​ ಪರಿಶೀಲನೆ ವೇಳೆ ತೋಟದಲ್ಲಿ ಮೂರು ಭ್ರೂಣಗಳ ಕಳೇಬರ ಪತ್ತೆಯಾಗಿವೆ.

ಈ ಭ್ರೂಣಗಳನ್ನು ತಂದು ಹೂಳುತ್ತಿದ್ದ ವೈದ್ಯ ಅಬ್ದುಲ್​ ಗಫಾರ್​ ಲಾಡಖಾನ್​​ನ​ ಸಹಾಯಕ ರೋಹಿತ್ ಕುಪ್ಪಸಗೌಡರ್​​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಬ್ದುಲ್​ ಗಫಾರ್​ ಲಾಡಖಾನ್ ಬಳಿ ರೋಹಿತ್ ಹಲವು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ್, ಮೂವರು ಸಿಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ನಕಲಿ ವೈದ್ಯ ಅಬ್ದುಲ್​ ಗಫಾರ್​ ಲಾಡಖಾನ್ ಸೇರಿದಂತೆ ಐವರು ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಏಳು, ಎಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಈ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಮಕ್ಕಳ ಮಾರಾಟ ಮಾಡುತ್ತಿದ್ದ ಆರೋಪಿ ನಕಲಿ ವೈದ್ಯ ಅಬ್ದುಲ್​ ಗಫಾರ್​ ಲಾಡಖಾನ್ ಭ್ರೂಣ ಹತ್ಯೆ ಕೂಡ ಮಾಡಿದ್ದಾನೆ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ.

Leave a Reply

Your email address will not be published. Required fields are marked *