September 16, 2024

ಹೋತ ಮರಿಗಳು ಕ್ರಮೇಣ 1.20. ಲಕ್ಷ ಹಾಗೂ 1.10 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿರುವ ಘಟನೆ ಬೆಳಗಾವಿ ಜಿಲ್ಕೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ. ಮಹೇಶ ರಾಯಪ್ಪ ಖೋತ ಹಾಗೂ ಗೂಳಪ್ಪ ಮಾಯಪ್ಪ ಪಾರ್ಥನಳ್ಳಿ ಅವರು ಸಾಕಿದ್ದ ಹೋತಮರಿ ಎಂದು ತಿಳಿದು ಬಂದಿದೆ. ಮಹೇಶ್ ಅವರ ತಂದೆ ರಾಯಪ್ಪ ಖೋತ ಅವರದು ಅವಿಭಕ್ತ ಕೃಷಿ ಕುಟುಂಬವಾಗಿದ್ದು, ಸುಮಾರು 80 ವರುಷಗಳಿಂದ ಆಡು, ಹೋತಮರಿ ಸಾಕಾಣಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಇವರಲ್ಲಿ 25 ಹೋತಮರಿಗಳು ಹಾಗೂ 12 ಆಡುಗಳು ಇವೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಸ್ಲಿಂ ಬಾಂಧವರು ತಮ್ಮ ರೋಜಾ ತಿಂಗಳು ಮುಗಿದ ನಂತರದಿಂದ ಬಕ್ರೀದ್ ಹಬ್ಬದವರೆಗೆ ಈ ಭಾಗಗಳಲ್ಲಿ ಹೋತಮರಿಗಳನ್ನು ಖುದ್ದು ನೋಡಿ ಹೋಗುತ್ತಾರೆ. ಹಲವರು ಮುಂಗಡ ಹಣ ಕೊಟ್ಟು ಬಕ್ರೀದ್ ಹಬ್ಬದ ಪೂರ್ವದಲ್ಲಿ ಹೋತ ಮರಿಗಳನ್ನು ಖರೀದಿ ಮಾಡಿ ಒಯ್ಯುತ್ತಾರೆ. ಬಿಟಲ್ ಜಾತಿಗೆ ಸೇರಿದ 150 ಕೆಜಿ ತುಕದ ಹೋತಮರಿ ಬರೋಬ್ಬರಿ 1.20 ಲಕ್ಷ ರೂಪಾಯಿಗೆ ಮಾರಾಟವಾದರೇ ಜವಾರಿ ಹೋತಮರಿ 1.10 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಅನಕ್ಷರಸ್ಥರಾಗಿದ್ದರೂ ಅನುಭಾವಿಯಂತೆ ಮಾತನಾಡುವ ರಾಯಪ್ಪ ಖೋತ ಅವರು “ಬಡವನ ಆಡ ದವಳಾವನ ಕುರಿ” ಬಡವನಿಗೆ ಕುಟುಂಬದಲ್ಲಿ ಕಷ್ಟ, ತಾಪತ್ರಯ, ಅಡಚಣೆಗಳು ಬಂದರೇ ಕೂಡಲೇ ಇರುವ ಒಂದು ಆಡುಮರಿ ಮಾರಿದರೇ ಅವನ ಜೀವನ ನಡದೇ ನಡೆಯುತ್ತದೆ ಎಂದು ಸೊಗಸಾಗಿಯೇ ವಿಶ್ಲೇಷಣೆ ಮಾಡುವ ಅನುಭವದ ಗಣಿ ರೈತ ರಾಯಪ್ಪ ಖೋತ ಅವರು ಇತರರಿಗೆ ಜೀವಂತ ನಿದರ್ಶನವಾಗಿದ್ದಾರೆ. ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾದ ಈ ಹೋತ ಮರಿಗಳನ್ನು ನೋಡಲು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಬರುತ್ತಿದ್ದಾರೆ ಎಂದು ಗ್ರಾಮದ ರೈತರಾದ ಅವಣ್ಣ ಬಾಳಪ್ಪ ನಿಂಗನೂರೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *