ಮೈಸೂರು: ಪ್ರಕರಣವೊಂದರಲ್ಲಿ ಸಿಲುಕಿದ್ದ ವ್ಯಕ್ತಿಯಿಂದ ಲಂಚವನ್ನು ಠಾಣೆಯೊಳಗೆ ಸ್ವೀಕರಿಸುತ್ತಿದ್ದ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್‌ಆಗಿಯೇ ಸೆರೆ ಹಿಡಿದಿದ್ದಾರೆ. ಕುವೆಂಪುನಗರ ಠಾಣೆ ಎಸ್‌ಐ ರಾಧಾ ಸಿಕ್ಕಿಬಿದ್ದವರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೈಸೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಹಣದೊಂದಿಗೆ ಸಬ್ ಇನ್ಸ್‌ಪೆಕ್ಟರ್ ಅವರನ್ನು ಬಂಧಿಸಿತು. ಬಂಧಿತ ಎಸ್‌ಐ ರಾಧಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತ ಮೈಸೂರು ವಿಭಾಗದ ಎಸ್ಪಿ ಎಂ.ಎಸ್.ಸಜಿತ್ ತಿಳಿಸಿದ್ದಾರೆ. ಮೈಸೂರಿನ ಕುವೆಂಪುನಗರ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರ ಲಾಕರ್ ಅನ್ನು ಜಪ್ತಿ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಲಾಕರ್ ವಿಚಾರದಲ್ಲಿ ದೂರು ದಾಖಲಾಗಿದ್ದರಿಂದ ಜಪ್ತಿಯಾಗಿತ್ತು. ಈ ಕುರಿತು ವಿಚಾರಣೆಯೂ ನಡೆಯುತ್ತಿದೆ. ಕುವೆಂಪುನಗರ ಠಾಣೆಯ ಈ ಪ್ರಕರಣದಲ್ಲಿ ತಮ್ಮ ಲಾಕರ್ ಅನ್ನು ವಾಪಾಸ್ ಪಡೆಯುವ ನಿಟ್ಟಿನಲ್ಲಿ ಕಾನೂನು ರೀತಿಯಲ್ಲಿ ಪ್ರಯತ್ನವೂ ನಡೆದಿತ್ತು.
ಇದರ ನಡುವೆ ಲಾಕರ್ ನೀಡಲು ಒಂದು ಲಕ್ಷ ರೂ.ಗಳನ್ನು ಕುವೆಂಪುನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ರಾಧಾ ಕೇಳಿದ್ದರು. ಆದರೆ 50 ಸಾವಿರ ರೂ.ಗೂ ಮಾತುಕತೆ ನಡೆದಿತ್ತು. ಹಣವನ್ನು ನೀಡಿದರೆ ಲಾಕರ್ ಬಿಡುಗಡೆ ಮಾಡಿಕೊಡುವುದಾಗಿ ಎಸ್‌ಐ ಭರವಸೆ ನೀಡಿದ್ದರು. ಠಾಣೆಗೆ ಅಲೆದು ಸುಸ್ತಾಗಿದ್ದ ವ್ಯಕ್ತಿ ಹಣಕ್ಕೆ ಒಪ್ಪಿಕೊಂಡು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಾಕರ್ ನೀಡುವ ವಿಚಾರದಲ್ಲಿ ಕುವೆಂಪುನಗರ ಎಸ್‌ಐ ರಾಧಾ ಅವರು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಅದರಂತೆ ವ್ಯಕ್ತಿ ಗುರುವಾರ ಮಧ್ಯಾಹ್ನ ಲಾಕರ್ ಪಡೆಯಲು ಕುವೆಂಪುನಗರ ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣೆಯಲ್ಲಿಯೇ ಇದ್ದ ರಾಧಾ ಅವರು ವ್ಯಕ್ತಿಯಿಂದ 50 ಸಾವಿರ ರೂ.ಗಳನ್ನು ಪಡೆಯಲು ಮುಂದಾದರು. ಹಣವನ್ನು ಸ್ವೀಕರಿಸಿ ಇಟ್ಟುಕೊಳ್ಳುವ ಹೊತ್ತಿಗೆ ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಸಜಿತ್, ಡಿವೈಎಸ್ಪಿ ಮಾಲತೇಶ್, ಇನ್ಸ್‌ಪೆಕ್ಟರ್ ಕೃಷ್ಣಯ್ಯ ಹಾಗೂ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿಯೇ ರಾಧಾ ಅವರನ್ನು ಹಿಡಿದರು. ಈ ವೇಳೆ ಹಣ ನನ್ನದಲ್ಲ ಎನ್ನುವ ಹೇಳಿಕೆ ನೀಡಿದರೂ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ವೇಳೆ ಎಸ್‌ಐ ಅವರು ಅನಗತ್ಯವಾಗಿ ನನ್ನನ್ನು ಇದರಲ್ಲಿ ಸಿಲುಕಿಸಲಾಗಿದೆ ಎಂದು ಕಣ್ಣೀರು ಕೂಡ ಹಾಕಿದರು.