ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಲಿದ್ದಾರೆ ಎಂಬ ವರ್ತಮಾನದ ಬೆನ್ನಲ್ಲೇ ಅವರ ಸಹೋದರ ಡಿ.ಕೆ.ಸುರೇಶ್ ಹೆಸರು ಫ್ರಂಟ್ ಲೈನಿಗೆ ಬಂದಿದೆ.
ಅಂದ ಹಾಗೆ ಕಳೆದ ವರ್ಷ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹುದ್ದೆಗೆ ಡಿ.ಕೆ.ಶಿವಕುಮಾರ್ ಅವರ ನೇಮಕವನ್ನು ಪ್ರಕಟಿಸಿದ್ದ ವರಿಷ್ಟರು,ಲೋಕಸಭಾ ಚುನಾವಣೆಯ ತನಕ ಡಿ.ಕೆ.ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದಿದ್ದರು.
ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಬರಲು ದಿನಗಣನೆ ಆರಂಭವಾಗುತ್ತಿದ್ದಂತೆಯೇ ಹೈಕಮಾಂಡ್ ವರಿಷ್ಟರಾಡಿದ್ದ ಮಾತು ಮುನ್ನೆಲೆಗೆ ಬಂದಿದೆ.ಅಷ್ಟೇ ಅಲ್ಲ ಡಿಕೆಶಿ ಕೆಳಗಿಳಿದರೆ ಆ ಜಾಗಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಮೇಲೆದ್ದಿದೆ.
ಹೀಗೆ ಡಿಕೆಶಿ ಜಾಗಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಖುದ್ದು ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರ ಹೆಸರು ಫ್ರಂಟ್ ಲೈನಿಗೆ ಬಂದಿದೆ.
ಕುತೂಹಲದ ಸಂಗತಿ ಎಂದರೆ ಈ ರೀತಿ ಡಿ.ಕೆ.ಸುರೇಶ್ ಹೆಸರು ಮುಂಚೂಣಿಗೆ ಬರಲು ಡಿಕೆಶಿ ಅವರ ಲೆಕ್ಕಾಚಾರವೇ ಕಾರಣ ಎಂಬುದು ಕಾಂಗ್ರೆಸ್ ಮೂಲಗಳ ಹೇಳಿಕೆ.
ಅರ್ಥಾತ್,ತಾವು ತೆರವು ಮಾಡುವ ಜಾಗಕ್ಕೆ ತಮ್ಮ ಸಹೋದರ ಡಿ.ಕೆ.ಸುರೇಶ್ ಬಂದು ಕುಳಿತರೆ ಪಕ್ಷದ ಮೇಲೆ ತಮಗೆ ಹಿಡಿತ ಇರುತ್ತದೆ ಎಂಬುದು ಡಿಕೆಶಿ ಯೋಚನೆ.ಹಾಗಂತಲೇ ಡಿ.ಕೆ.ಸುರೇಶ್ ಪರವಾಗಿ ಅಭಿಪ್ರಾಯ ಮೂಡಿಸಲು ಡಿಕೆಶಿ ವಿದ್ಯುಕ್ತ ಯತ್ನ ಆರಂಭಿಸಿದ್ದಾರೆ.ಸಚಿವರು ಮತ್ತು ಶಾಸಕರ ಮಟ್ಟದಲ್ಲಿ ಈಗಾಗಲೇ ಈ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ ಎಂಬುದು ಕೈ ಪಾಳಯದ ಮಾತು.
ಅಂದ ಹಾಗೆ ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿಕೆಶಿ ಅದಕ್ಕೆ ಪವರ್ ತುಂಬಿದ್ದಾರೆ.ಸಂಘಟನೆಗೆ ಅವರು ಕೊಟ್ಟ ಟಾನಿಕ್ ವಿಧಾನಸಭೆ ಚುನಾವಣೆಯಲ್ಲಷ್ಟೇ ಅಲ್ಲ,ಈಗ ನಡೆದಿರುವ ಲೋಕಸಭಾ ಚುನಾವಣೆಯಲ್ಲೂ ವರ್ಕ್ ಔಟ್ ಆಗಿ ಹದಿನೈದು ಕ್ಷೇತ್ರಗಳಲ್ಲಿ ಕೈಗೆ ಗೆಲುವು ದಕ್ಕಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಹೀಗಿರುವಾಗ ತಾವು ಬಲಿಷ್ಟಗೊಳಿಸಿದ ಕೆಪಿಸಿಸಿಯ ಪಟ್ಟಕ್ಕೆ ಬೇರೊಬ್ಬರ ಬದಲು ತಮ್ಮ ಸಹೋದರ ಡಿ.ಕೆ.ಸುರೇಶ್ ಬಂದು ಕೂರಲಿ ಅಂತ ಡಿಕೆಶಿ ಬಯಸಿದ್ದಾರೆ.ಯಾವಾಗ ಅವರು ಡಿಕೆಸು ಹೆಸರು ಫ್ರಂಟ್ ಲೈನಿಗೆ ಬರುವಂತೆ ಮಾಡಿದರೋ?ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯುಕ್ತವಾಗಿ ರೇಸು ಆರಂಭವಾಗಿದ್ದು ಕೆಲ ನಾಯಕರ ಹೆಸರುಗಳು ರೇಸಿಗೆ ಬಂದು ನಿಂತಿವೆ.
ಅಂದ ಹಾಗೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಇಳಿದರೆ ಅವರ ಜಾಗಕ್ಕೆ ಲಿಂಗಾಯತ ನಾಯಕರೊಬ್ಬರನ್ನು ತರಬೇಕು ಅಂತ ಸಿದ್ಧರಾಮಯ್ಯ ಕ್ಯಾಂಪು ಯೋಚಿಸಿತ್ತೇನೋ ನಿಜ.ಆದರ ಪ್ರಕಾರ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರ ಹೆಸರು ಈ ಕ್ಯಾಂಪಿನ ಆಯ್ಕೆಯಾಗಿತ್ತು.ಆದರೆ ಈ ವಿಷಯದಲ್ಲಿ ಸ್ವತ: ಎಂ.ಬಿ.ಪಾಟೀಲರಿಗೆ ಆಸಕ್ತಿ ಇಲ್ಲ.ಇನ್ನು ಹಿರಿತನವನ್ನು ಮಾನದಂಡವಾಗಿಟ್ಟುಕೊಂಡು ಎಸ್.ಆರ್.ಪಾಟೀಲರ ಹೆಸರು ಪ್ರಸ್ತಾಪವಾಗಿದೆಯಾದರೂ ಅದಕ್ಕೆ ತುಂಬ ಬಲ ದೊರಕುತ್ತಿಲ್ಲ.
ಇಷ್ಡೆಲ್ಲದರ ಮಧ್ಯೆ ದಲಿತ ನಾಯಕರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಹೆಸರು ಪ್ರಸ್ತಾಪವಾಗುತ್ತಿದ್ದರೂ ಈ ಇಬ್ಬರು ನಾಯಕರಿಗೆ ಆಸಕ್ತಿ ಇಲ್ಲ.ಕಾರಣ?ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕರ್ನಾಟಕದಲ್ಲಿ ಹೆಚ್ಚುವರಿ ಡಿಸಿಎಂಗಳು ಬೇಕು ಎಂಬ ಕೂಗು ಶುರುವಾಗುತ್ತದೆ.ಈ ಕೂಗಿನ ಮಧ್ಯೆ ಹೇಗಾದರೂ ಮಾಡಿ ಡಿಸಿಎಂ ಹುದ್ದೆಯಲ್ಲಿ ಸೆಟ್ಲಾಗಬೇಕು ಎಂಬ ಯೋಚನೆ ಈ ನಾಯಕರಲ್ಲಿದೆ.
ಇಂತಹ ಹೊತ್ತಿನಲ್ಲೇ ಪರಿಶಿಷ್ಟ ಪಂಗಡದ ಪವರ್ ಫುಲ್ ನಾಯಕ,ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು,ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಪಿಸಿಸಿ ಅಧ್ಯಕ್ಷನಾಗಲು ನಾನು ರೆಡಿ ಅಂತ ಮುಂದೆ ಬಂದಿದ್ದು, ಸಹಜವಾಗಿಯೇ ಸಿದ್ದರಾಮಯ್ಯ ಕ್ಯಾಂಪು ಅವರ ಬೆನ್ನಿಗೆ ನಿಲ್ಲುವುದು ಖಚಿತವಾಗಿದೆ.
ಅಂದ ಹಾಗೆ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲದಿಂದಲೂ ಸಿದ್ದರಾಮಯ್ಯ ಕ್ಯಾಂಪಿನ ಪ್ರಮುಖ ಶಕ್ತಿಯಾಗಿರುವ ರಾಜಣ್ಣ,ಟೈಮು ಟೈಮಿಗೆ ಸಿದ್ಧರಾಮಯ್ಯ ಅವರ ಪರವಾಗಿ ಮಾತನಾಡಿದ್ದಾರೆ.ಈ ಅವಧಿ ಮುಗಿಯುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ.ಅವರು ಕೆಳಗಿಳಿಯುವ ಮಾತೇ ಇಲ್ಲ ಅಂತ ಖಡಕ್ಕಾಗಿ ಹೇಳಿ ವರಿಷ್ಟರೇ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.ಅಷ್ಟೇ ಅಲ್ಲ,ಪಕ್ಷ ಸಂಘಟನೆಗಾಗಿ ಹೆಚ್ಚುವರಿ ಡಿಸಿಎಂಗಳು ಬೇಕು ಅಂತ ಹೇಳಿ ಸಿದ್ಧು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಮೂಲಗಳ ಪ್ರಕಾರ,ಇವತ್ತು ಕರ್ನಾಟಕದ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತೇ ಅಂತಿಮ.ಹೀಗಾಗಿ ಸಧ್ಯದಲ್ಲೇ ದೆಹಲಿ ಯಾತ್ರೆ ಮಾಡಲಿರುವ ರಾಜಣ್ಣ,ಯಾವ ಕಾರಣಕ್ಕಾಗಿ ತಮ್ಮನ್ನು ಕೆಪಿಸಿಸಿಯ ಪಟ್ಟಕ್ಕೆ ತರಬೇಕು ಅಂತ ವಿವರಿಸಲಿದ್ದಾರಂತೆ