ಭೋಪಾಲ್: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರ ಎಂದು ಮದ್ಯದ ಬಾಟಲಿ ಮೇಲೆಯೇ ಬರೆಯಲಾಗಿರುತ್ತದೆ. ಇನ್ನು ಜಾಹೀರಾತುಗಳ ಮೂಲಕವೂ ಮದ್ಯಪಾನದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಜಾಹೀರಾತು, ಜಾಗೃತಿ ಬಿಡಿ, ವೈದ್ಯರು ವೈಯಕ್ತಿಕವಾಗಿ ಹೇಳಿದರೂ ಮದ್ಯಪಾನ ಬಿಡದ ‘ಚಟವಾದಿ’ಗಳು ತುಂಬ ಇರುತ್ತಾರೆ.
ಇನ್ನು, ಮಧ್ಯಪ್ರದೇಶದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಬಿಯರ್ ಸೇವಿಸಿ ಮೃತಪಟ್ಟಿರುವುದೇ ಆಲ್ಕೋಹಾಲ್ ಹೇಗೆ ಜೀವದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ನಿದರ್ಶನ ಸಿಕ್ಕಿದೆ.
ಹೌದು, ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ವಿಶೇಷ ಸಶಸ್ತ್ರ ಪಡೆಯ (SAF) ಇಬ್ಬರು ಪೇದೆಗಳು ಬಿಯರ್ ಸೇವಿಸಿ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರೇ ಮಾಹಿತಿ ನೀಡಿದ್ದಾರೆ. ಮೃತ ಕಾನ್‌ಸ್ಟೆಬಲ್‌ಗಳನ್ನು ದನಿರಾಮ್ ಉಯಿಕೆ (55) ಹಾಗೂ ಪ್ರೇಮ್‌ಲಾಲ್ ಕಾಕೋಡಿಯಾ (50) ಎಂಬುದಾಗಿ ಗುರುತಿಸಲಾಗಿದೆ. ಇವರು ಎಸ್‌ಎಎಫ್‌ನ 8ನೇ ಬೆಟಾಲಿಯನ್ ಸಿಬ್ಬಂದಿ ಆಗಿದ್ದರು. ಶನಿವಾರ ರಾತ್ರಿ ಇವರು ಬಿಯರ್ ಸೇವಿಸಿದ್ದು, ನಂತರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದನಿರಾಮ್ ಹಾಗೂ ಪ್ರೇಮ್‌ಲಾಲ್ ಅವರು ಆಪ್ತರಾಗಿದ್ದು, ಶನಿವಾರ ರಾತ್ರಿ ಇಬ್ಬರೂ ಬಿಯರ್ ಪಾರ್ಟಿ ಮಾಡಿದ್ದಾರೆ. ಇಬ್ಬರೂ ಊಟ ಮಾಡಿ ಮಲಗಿದ್ದು, ಕೆಲ ಹೊತ್ತಿನಲ್ಲಿಯೇ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು, ಇಬ್ಬರ ಸಾವಿಗೆ ಏನು ಕಾರಣ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಯರ್ ಎಷ್ಟು ಅಪಾಯಕಾರಿ ಎಂಬ ಕುರಿತು ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ಕೆಲ ತಿಂಗಳ ಹಿಂದೆ, ಯುರೋಪಿಯನ್ ಯುನಿಯನ್‌ನ ಯುರೋಪಿಯನ್ ಫುಡ್ ಸೇಫ್ಟಿ ಏಜೆನ್ಸಿಯು ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ಬಿಯರ್ ಕುರಿತ ಹತ್ತಾರು ಭಯಾನಕ ಅಂಶಗಳನ್ನು ತೆರೆದಿಟ್ಟಿತ್ತು. “ಬಿಯರ್ ಹಾಗೂ ಮಾಂಸದಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ರಾಸಾಯನಿಕಗಳಿವೆ. ಅದರಲ್ಲೂ, ನೈಟ್ರೋಸಮೈನ್ಸ್ ಎಂಬ ರಾಸಾಯನಿಕವು ಕ್ಯಾನ್ಸರ್‌ಕಾರಕವಾಗಿದೆ. ಬಿಯರ್ ಹಾಗೂ ಮಾಂಸದಲ್ಲಿ ಈ ಅಂಶವು ಪತ್ತೆಯಾಗಿರುವುದರಿಂದ ಸೇವಿಸುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ” ಎಂದು ತಿಳಿಸಿತ್ತು.