November 22, 2024

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಇಬ್ಬರ ಹತ್ಯೆ ಪ್ರಕರಣ ಭೇದಿಸಿರುವ ಬನಶಂಕರಿ ಠಾಣೆ ಪೊಲೀಸರು, ಆರೋಪಿ ಎಂ. ಗಿರೀಶ್ ಅಲಿಯಾಸ್ ಗಿರಿಯನ್ನು (26) ಬಂಧಿಸಿದ್ದಾರೆ.
ಸುಬ್ರಹ್ಮಣ್ಯಪುರದ ವಸಂತಪುರ ಗುಡ್ಡೆಯ ಗಿರೀಶ್, ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಪರಾರಿಯಾಗಿದ್ದ.
ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಗಿರೀಶ್‌ನನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಗಿರೀಶ್, ಡ್ರಗ್ಸ್ ವ್ಯಸನಿ. ನಿತ್ಯವೂ ಗಾಂಜಾ ತೆಗೆದುಕೊಳ್ಳುತ್ತಿದ್ದ. ಕೆಲ ಔಷಧ ಮಳಿಗೆಯಲ್ಲಿ ಅಕ್ರಮವಾಗಿ ಮಾರುತ್ತಿದ್ದ ನಿಷೇಧಿತ ಮಾತ್ರೆಗಳನ್ನೂ ಖರೀದಿಸಿ ನುಂಗಿ ನಶೆ ಏರಿಸಿಕೊಳ್ಳುತ್ತಿದ್ದ. ಇದೇ ಅಮಲಿನಲ್ಲಿ ನಗರದೆಲ್ಲೆಡೆ ರಾತ್ರಿ ಸುತ್ತಾಡುತ್ತಿದ್ದ. ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದವರನ್ನು ಸುಲಿಗೆ ಮಾಡುತ್ತಿದ್ದ. ಹಣ ನೀಡದಿದ್ದಕ್ಕೆ ಇಬ್ಬರನ್ನು ಕೊಂದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ಮನೆಯಿಂದ ದೂರವಿದ್ದ ಆರೋಪಿ: ‘ಗಿರೀಶ್‌ನ ತಂದೆ ಸುಮಾರು 10 ವರ್ಷಗಳ ಹಿಂದೆಯೇ ಎರಡನೇ ಮದುವೆಯಾಗಿ ಪ್ರತ್ಯೇಕವಾಗಿ ವಾಸವಿದ್ದಾರೆ. ತಾಯಿ ಹಾಗೂ ತಂಗಿ ಜೊತೆ ಗಿರೀಶ್ ವಾಸವಿದ್ದ. ವಸಂತಪುರ ಗುಡ್ಡೆಯಲ್ಲಿದ್ದ ಮನೆಯನ್ನು ಕೆಲ ವರ್ಷಗಳ ಹಿಂದೆಯೇ ಮಾರಾಟ ಮಾಡಿದ್ದ ತಾಯಿ-ತಂಗಿ, ಕೇರಳಕ್ಕೆ ಹೋಗಿ ನೆಲೆಸಿದ್ದಾರೆ. ಆದರೆ, ಗಿರೀಶ್ ಬೆಂಗಳೂರು ಬಿಟ್ಟು ಹೋಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಗಿರೀಶ್, ಗಾರೆ ಕೆಲಸ, ಹೋಟೆಲ್ ಸಹಾಯಕ ಹಾಗೂ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. 2015ರಿಂದ ಸ್ನೇಹಿತರ ಜೊತೆ ಸೇರಿ ಅಪರಾಧ ಕೃತ್ಯ ಎಸಗಲಾರಂಭಿಸಿದ್ದ. ಹಲ್ಲೆ, ಲೈಂಗಿಕ ದೌರ್ಜನ್ಯ, ದರೋಡೆಗೆ ಸಂಬಂಧಪಟ್ಟಂತೆ ಈತನ ವಿರುದ್ಧ 4 ಪ್ರಕರಣಗಳು ದಾಖಲಾಗಿದ್ದವು. ಈತ ಜೈಲಿಗೂ ಹೋಗಿ, ಜಾಮೀನು ಮೇಲೆ ಹೊರಗೆ ಬಂದಿದ್ದ’ ಎಂದರು.

ಸ್ನೇಹಿತನ ಕೊಂದಿದ್ದ: ‘ಸಿಟಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಆರೋಪಿ ಗಿರೀಶ್ ಸುತ್ತಾಡುತ್ತಿದ್ದ. ಇದೇ ಸಂದರ್ಭದಲ್ಲಿ ಸ್ನೇಹಿತ ಸುರೇಶ್ ಉರುಫ್ ಸೂರಿ ಭೇಟಿಯಾಗಿದ್ದ. ಡ್ರಗ್ಸ್ ಅಮಲಿನಲ್ಲಿದ್ದ ಗಿರೀಶ್, ಹಣ ನೀಡುವಂತೆ ಸ್ನೇಹಿತನನ್ನು ಕೇಳಿದ್ದ. ತಮ್ಮ ಬಳಿ ಹಣವಿಲ್ಲವೆಂದು ಸುರೇಶ್ ಹೇಳಿದ್ದ. ಅಷ್ಟಕ್ಕೆ ಕೋಪಗೊಂಡ ಆರೋಪಿ, ಸುರೇಶ್ ಮೇಲೆ ಹಲ್ಲೆ ಮಾಡಿದ್ದ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಸ್ಥಳದಿಂದ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಸುರೇಶ್ ಕೊಲೆ ಸಂಬಂಧ ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ’ ಎಂದರು.

‘ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಾತ್ರಿ ಸುತ್ತಾಡುತ್ತಿದ್ದ ಆರೋಪಿ ಗಿರೀಶ್, ರಸ್ತೆ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಲು ಯತ್ನಿಸಿದ್ದ. ಆದರೆ, ಅವರು ಹಣ ಕೊಟ್ಟಿರಲಿಲ್ಲ. ಅವರ ಮೇಲೆಯೂ ಹಲ್ಲೆ ಮಾಡಿದ್ದ ಆರೋಪಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ತಲೆಮರೆಸಿಕೊಂಡಿದ್ದ. ಕೊಲೆಯಾಗಿದ್ದ ವ್ಯಕ್ತಿಯ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದಾಗ, ಆರೋಪಿ ಗಿರೀಶ್ ಸಿಕ್ಕಿಬಿದ್ದ’ ಎಂದು ಪೊಲೀಸರು ಹೇಳಿದರು.

 

Leave a Reply

Your email address will not be published. Required fields are marked *