September 8, 2024

ಉಡುಪಿ: ಗ್ಯಾಂಗ್​ವಾರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಕಾಪು ಪೊಲೀಸರಿಗೆ ಶರಣಾಗಿದ್ದಾರೆ. ಮೂವರು ಅರೋಪಿಗಳನ್ನು ಕಾಪು ಪೋಲೀಸರು ಉಡುಪಿ ನಗರ ಪೋಲಿಸರಿಗೆ ಒಪ್ಪಿಸಿದ್ದಾರೆ. ಗರುಡ ಗ್ಯಾಂಗ್​ನ ಮಜೀದ್, ಅಲ್ಫಾಜ್, ಶರೀಫ್ ಶರಣಾದವರು.
ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ಮೇ 18ರ ಮುಂಜಾನೆ 2 ಗಂಟೆಯ ಹೊತ್ತಿಗೆ ಕುಂಜಿಬೆಟ್ಟು ರಸ್ತೆಯಲ್ಲಿ ಒಂದೆ ಗುಂಪಿನ ಎರಡು ತಂಡಗಳು ಗಾಂಜಾ ಅಮಲಿನಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಕಾಳಗ ನಡೆಸಿದ್ದವು. ಅಲ್ಲದೆ ತಲವಾರು ಹಿಡಿದು, ಬಡಿದಾಡಿಕೊಂಡಿದ್ದವು. ನಗರವೆಲ್ಲ ಸೈಲೆಂಟ್‌ ಆಗಿರುವ ಹೊತ್ತಿಗೆ ಕಾರುಗಳ ಗುದ್ದಾಟ, ತಲವಾರು ಹಿಡಿದು ಬಡಿದಾಡುತ್ತಿರುವುದನ್ನು ಸುತ್ತಲಿನ ಫ್ಲ್ಯಾಟ್‌ ನಿವಾಸಿಗಳು ಕಂಡು ಬೆಚ್ಚಿ ಬಿದ್ದಿದ್ದಾರೆ.
ಉಡುಪಿಯ ಕಾಪುವಿನಲ್ಲಿ ಟೀಂ ಗರುಡ ಹೆಸರಿನಲ್ಲಿ ತಂಡ ಕಟ್ಟಿಕೊಂಡಿದ್ದ ಪುಂಡರು ಗಾಂಜಾ, ದನ ಕಳ್ಳತನ, ದರೋಡೆಯಲ್ಲಿ ಸಕ್ರಿಯವಾಗಿತ್ತು. ಸದಾ ತಲವಾರು, ಕತ್ತಿ, ಡ್ರ್ಯಾಗನ್‌ ಹಿಡಿದು ತಿರುಗಾಡುತ್ತಿದ್ದ ಈ ಗುಂಪಿಗೆ ರೌಡಿಶೀಟರ್‌ ಆಶಿಕ್‌ ಎಂಬಾತನೇ ಕ್ಯಾಪ್ಟನ್‌. ನಾಲ್ಕು ವರ್ಷದ ಹಿಂದೆ ಅಂದಿನ ಎಸ್ಪಿ ಡಾ. ವಿಷ್ಣುವರ್ಧನ್‌ ಈ ತಂಡದ ಹೆಡೆಮುರಿ ಕಟ್ಟಿದ್ದರು.
ಎರಡು ವಾರದ ಹಿಂದೆ ಆಶಿಕ್‌ ಮತ್ತು ಅಲ್ಫಾಝ್‌ ನಡುವೆ ಜಗಳ ನಡೆದಿತ್ತು. ಒಂದೇ ತಂಡ ಆಗಿದ್ದರಿಂದ “ರಾಜಿ ಆಗುವ ಬಾ, ಗಲಾಟೆ ಬೇಡ” ಅಂತ ಆಶಿಕ್‌ನನ್ನು ಅಲ್ಫಾಝ್‌ ಟೀಂ ಕರೆಸಿಕೊಂಡಿತ್ತು. ಆದರೆ ಅಲ್ಫಾಝ್‌ ವಿಷಯ ಗೊತ್ತಿದ್ದ ಆಶಿಕ್‌ ಕುಂಜಿಬೆಟ್ಟಿಗೆ ಬಂದವನು ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್‌ನನ್ನ ಮಟ್ಟ ಹಾಕಲು ಅಲ್ಫಾಝ್‌ ಪ್ರಯತ್ನಿಸಿದನು. ಅಷ್ಟೇ ಅಲ್ಲ, ತಲವಾರು ದಾಳಿ ನಡೆಸಲು ಮುಂದಾಗಿದ್ದಾಬೆ. ಇಷ್ಟಾಗುತ್ತಲೇ ಆಶಿಕ್‌ ಕಡೆಯವರು ತಮ್ಮ ಸ್ವಿಫ್ಟ್‌ ಕಾರನ್ನ ಶರೀಫ್‌ ಎಂಬಾತನ ಮೇಲೆ ಹರಿಸಿದ್ದರು.
ಈ ಘಟನೆ ಸಂಬಂಧ ಈಗಾಗಲೇ ಉಡುಪಿ ನಗರ ಪೊಲೀಸರು ಗ್ಯಾಂಗ್​ ವಾರ್​ನಲ್ಲಿ ಭಾಗಿಯಾಗಿದ್ದ ಆಶಿಕ್, ರಾಕೀಬ್, ಸಕ್ಲೈನ್, ಮಜೀದ್, ಅಲ್ಫಾಜ್, ಶರೀಫ್ ಎಂಬುವರನ್ನು ಬಂಧಿಸಿದ್ದಾರೆ.

 

Leave a Reply

Your email address will not be published. Required fields are marked *