September 17, 2024

ನವದೆಹಲಿ: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿಗೆ ತೆರಳಿದ ಬಳಿಕ ತಲೆಮರಿಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಮಾಡಿದ ಮನವಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಂದಿಸಿದೆ.
ಪ್ರಜ್ವಲ್ ರೇವಣ್ಣಗೆ ಎಂಇಎ ನೋಟಿಸ್ ನೀಡಿದೆ. ಆರೋಪಿ 10 ದಿನಗಳೊಳಗೆ ನೋಟಿಸ್‌ಗೆ ಪ್ರತಿಕ್ರಿಯಿಸಬೇಕಿದೆ.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಕರ್ನಾಟಕ ಸರ್ಕಾರದ ಔಪಚಾರಿಕ ಪತ್ರವನ್ನು ಸ್ವೀಕರಿಸಿದ ನಂತರ, ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಇದು ಸರಿಯಾದ ಪ್ರಕ್ರಿಯೆಯ ಭಾಗವಾಗಿದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಲ್ಲಾ ಹಂತಗಳ ಮೂಲಕ ಸಾಗುತ್ತಿದೆ. ಪಾಸ್‌ಪೋರ್ಟ್ ರದ್ದುಗೊಳಿಸಲು ವಿನಂತಿ ಇದ್ದರೆ, ಸಂಬಂಧಪಟ್ಟ ವ್ಯಕ್ತಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಬೇಕು” ಹೇಳಿವೆ.
ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗನೂ ಆಗಿರುವ ಕರ್ನಾಟಕದ ಹಾಸನದ 33 ವರ್ಷದ ಸಂಸದ ಪ್ರಜ್ವಲ್ ರೇವಣ್ಣ, ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ ಮಹಿಳೆ ಮೇಲೆ ಲೌಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ. ಇಷ್ಟೇ ಅಲ್ಲ, ಅತ್ಯಾಚಾರ, ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಸಾವಿರಾರು ವೀಡಿಯೊಗಳು ವೈರಲ್ ಆಗಿದೆ. ಈತನ ವಿರುದ್ಧ ಬೆದರಿಕೆ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ದಾಖಲಾಗಿವೆ.
ವಿಡಿಯೊಗಳು ವೈರಲ್ ಬಳಿಕ ಬೆಂಗಳೂರಿನಿಂದ ವಿದೇಶಕ್ಕೆ ಹೋದ ಬಳಿಕ ತಲೆಮರಿಸಿಕೊಂಡಿರುವ ಪ್ರಜ್ವಲ್ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ (ಮೇ 23) ಎರಡನೇ ಬಾರಿಗೆ ಪತ್ರ ಬರೆದಿದ್ರು. ಪ್ರಜ್ವಲ್ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ತಮ್ಮ ಸಚಿವಾಲಯಕ್ಕೆ ಮೇ 21ರಂದು ಮನವಿ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶುಕ್ರವಾರ (ಮೇ 24) ಒಪ್ಪಿಕೊಂಡಿದ್ದಾರೆ.
ಈ ವಿಷಯದ ಕಾರ್ಯವಿಧಾನದ ಅಂಶಗಳನ್ನು ವಿವರಿಸಿದ ಅವರು, ಪಾಸ್ ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಪಾಸ್ ಪೋರ್ಟ್ ಕಾಯ್ದೆಯಿಂದ ನಿಯಂತ್ರಿಸಲ್ಪಡುತ್ತದೆ. “ಹಾಗೆ ಮಾಡಲು ನಮಗೆ ನ್ಯಾಯಾಂಗ ನ್ಯಾಯಾಲಯ ಅಥವಾ ಪೊಲೀಸ್ ಬೆಂಬಲ ಬೇಕು” ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ಮನವಿಯನ್ನು ಸ್ವೀಕರಿಸಿದ ಸಚಿವಾಲಯವು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. “ನಾವು ತಕ್ಷಣವೇ ಅದರ ಮೇಲೆ ಕ್ರಮ ಕೈಗೊಂಡಿದ್ದೇವೆ. ನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸಬೇಕು. ಅದರಂತೆ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವ ಡಾ ಎಸ್‌ ಜೈಶಂಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *