ಮೈಸೂರು: ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಕುಮಾರಸ್ವಾಮಿ (45), ಮಂಜುಳಾ (39), ಅರ್ಚನಾ (19), ಸ್ವಾತಿ (17) ಎಂದು ಗುರುತಿಸಲಾಗಿದೆ. ಮೃತ ಕುಮಾರಸ್ವಾಮಿ ಅವರು ಬಟ್ಟೆ ಐರನ್ ಮಾಡುವ ಕೆಲಸ ಮಾಡಿಕೊಂಡು ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದರು.
ಸದ್ಯ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸೋರಿಕೆ ಶಂಕೆ ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ ಆದರೂ ಮನೆಯಿಂದ ಯಾರು ಹೊರಬಾರದ ಕಾರಣ ಅಕ್ಕಪಕ್ಕದ ಮನೆಯವರು ಮನೆಯ ಬಳಿ ಪರಿಶೀಲನೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಬಂದು ಮನೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಮೃತದೇಹಗಳು ಮಲಗಿದ್ದಲ್ಲೇ ಇರೋದು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಮನೆಯಲ್ಲಿದ್ದ ಸಿಲಿಂಡರ್ ಅನ್ನು ಹೊರ ತೆಗೆದಿಟ್ಟು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಾಡಲು ಪೊಲೀಸರು ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡ್ತಿದ್ದಾರೆ. ಒಟ್ಟಿಗೆ ನಾಲ್ವರು ಕುಟುಂಬಸ್ಥರನ್ನು ಕಳೆದುಕೊಂಡ ಸಂಬಂಧಿಗಳ ಅಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದೆ.
ಮನೆಯಲ್ಲಿ ನಾಲ್ಕು ಸಿಲಿಂಡರ್ ಕಂಡು ಬಂದಿದೆ. ಮೊದಲು ಕಲ್ಲಿದ್ದಿಲಿನಲ್ಲಿ ಐರನ್ ಮಾಡುತ್ತಿದ್ದರು, ಇತ್ತೀಚೆಗೆ ಗ್ಯಾಸ್ ಮೂಲಕ ಐರನ್ ಮಾಡಲು ಪ್ರಾರಂಭ ಮಾಡಿದ್ದರು. ಪೊಲೀಸರು ಮುಂದಿನ ತನಿಖೆ ನಡೆಸಿ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು, ಹೆಚ್ಚಿನ ಬಟ್ಟೆಗಳು ಬಂದಾಗ ಮನೆಗೂ ತಂದು ಐರನ್ ಮಾಡ್ತಿದ್ದರು. ಮೃತ ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದರು, ಓರ್ವ ಯುವತಿ ಡಿಗ್ರಿ, ಮತ್ತೋರ್ವ ಮಗು ಪಿಯು ಓದುತ್ತಿದ್ದರು. ಮೃತರು ಗಾಢ ನಿದ್ದೆಯಲ್ಲಿದ್ದ ಕಾರಣ ಘಟನೆ ಆಗಿದೆ ಎಂಬ ಶಂಕೆ ವ್ಯಕ್ತವಾಗಿದೆ.