September 19, 2024

ಬೆಂಗಳೂರು: ಉತ್ತರ ಉಪ ವಲಯದ ಯಲಹಂಕ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿನ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದಲ್ಲಿ ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಬಡಾವಣೆ ಅಭಿವೃದ್ಧಿಪಡಿಸಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.
ಬೆಂಗಳೂರಿನ ಕೆ ಕೆಂಪಣ್ಣ ಸೇರಿದಂತೆ ಹೊಸಹಳ್ಳಿಯ ಗ್ರಾಮದ 21 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ಉಪ ವಲಯದ ಉಪ ವಿಭಾಗಾಧಿಕಾರಿ, ಯಲಹಂಕ ತಹಸೀಲ್ದಾರ್‌, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಮತ್ತು ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿ ಮಾಡಿತು.

ಪ್ರಕರಣದ ಹಿನ್ನೆಲೆ: ನ್ಯಾಯಾಲಯಕ್ಕೆಸಲ್ಲಿಸಲಾಗಿರುವ ಅರ್ಜಿಯಲ್ಲಿ ದಾಖಲೆಗಳ ಪ್ರಕಾರ ಹೊಸಹಳ್ಳಿ ಗ್ರಾಮದ ಸರ್ವೇ ನಂ 10, 11, 12, 13, 134, 135, 136, 137, 138 ಮತ್ತು 139ರಲ್ಲಿನ ಜಾಗವನ್ನು ರಾಜಕಾಲುವೆ (ಬಿ ಖರಾಜು ಜಮೀನು) ಜಾಗ ಎಂದು ಗುರುತಿಸಲಾಗಿದೆ. ಆ ಜಾಗದ ಮೂಲಕವೇ ಸಾರ್ವಜನಿಕ ಮಾರ್ಗ ಹಾದು ಹೋಗುತ್ತದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಲಾಗಿದೆ. ಆದರೆ, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗವಿರುವ ಸಂಗತಿ ಮರೆಮಾಚಿ ಈ ಸರ್ವೇ ನಂಬರ್‌ನಲ್ಲಿನ ಎಲ್ಲಾ ಜಾಗವನ್ನು ಸ್ಯಾಮೀಸ್‌ ಕಂಪೆನಿ ವಿವಿಧ ಹೆಸರುಗಳಲ್ಲಿ ಖರೀದಿ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ಪಡೆದುಕೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮುಂದುವರಿದು, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದ ಜಾಗ ಮುಚ್ಚಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಒತ್ತುವರಿ ತೆರವುಗೊಳಿಸಲು ಕೋರಿ ರಾಜ್ಯ ಸರ್ಕಾರಕ್ಕೆ 2024ರ ಏಪ್ರಿಲ್‌ 12 ಹಾಗೂ ಮಾರ್ಚ್‌ 5ರಂದು ಸರ್ಕಾರ ಮತ್ತದರ ಪ್ರಾಧಿಕಾರಗಳಿಗೆ ಮನವಿ ಪತ್ರ ನೀಡಲಾಗಿದೆ. ಮತ್ತೊಂದೆಡೆ ಸರ್ಕಾರ ಈವರೆಗೂ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಅಲ್ಲದೇ, ರಾಜಕಾಲುವೆ ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಾನೂನುಬಾಹಿರ. ರಾಜಕಾಲುವೆ ಜಾಗದಲ್ಲಿ ಅಭಿವೃದ್ಧಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎನ್ನಲಾಗಿದೆ. ಆದ್ದರಿಂದ, ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗ ಜಾಗದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಸ್ಯಾಮಿಸ್‌ ಕಂಪೆನಿಗೆ ನೀಡಲಾಗಿರುವ ಅನುಮೋದನೆ ರದ್ದುಪಡಿಸಬೇಕು ಮತ್ತು ಕಂಪೆನಿಯಿಂದ ನಡೆದಿರುವ ಒತ್ತುವರಿ ತೆರವುಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Leave a Reply

Your email address will not be published. Required fields are marked *