ಬೆಂಗಳೂರು: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಸ್ವತಃ ಸಿಐಡಿ ಅಧಿಕಾರಿಗಳೇ ನಿರುದ್ಯೋಗಿ ಯುವಕನಿಂದ 40 ಲಕ್ಷ ರೂ. ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸರ್ಕಾರಿ ಅಧಿಕಾರಿಯಿಂದ ಲಕ್ಷಾಂತರ ಹಣ ವಂಚನೆ ಆರೋಪ ಕೇಳಿ ಬಂದಿದೆ. ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ ಸಿಐಡಿಯ ಮಹಿಳಾ ಪೊಲೀಸ್ ಅಧಿಕಾರಿ ಸೇರಿ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿದ್ದ ಅನಿತಾ.ಬಿ.ಎಸ್ ಹಾಗೂ ರಾಮಚಂದ್ರ ಭಟ್ ಬಂಧಿತರಾಗಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರಿಗೆ ಬರೋಬ್ಬರಿ 40 ಲಕ್ಷ ರೂ. ವಂಚನೆ ಮಾಡಿದ್ದಾರೆ. ರಾಮಚಂದ್ರಭಟ್ ಎನ್ನುವವರು ಸಿಐಡಿ ಇಲಾಖೆ ಅಧಿಕಾರಿ ಅನಿತಾ ಅವರನ್ನು ಭೇಟಿ ಮಾಡಿಸಿ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವೇಳೆ ನಿರುದ್ಯೋಗಿ ಯುವಕ ಸುನೀಲ್‌ಗೆ ಕೆಪಿಎಸ್‌ಸಿ ನೇಮಕಾತಿಯ ಮೂಲಕ ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಕೊಡಿಸುದಾಗಿ ನಂಬಿಸಿದ್ದರು. ಇದಕ್ಕೆ ಹಂತ ಹಂತವಾಗಿ ನೀನು ಹಣ ಕೊಟ್ಟರೆ ಕೆಲಸ ಕೊಡಿಸುವುದಾಗಿ ತಿಳಿಸಿ ನಲವತ್ತು ಲಕ್ಷ ರೂ.ವರೆಗೆ ಹಣ ಪಡೆದಿದ್ದಾರೆ. ಆದರೆ, ಕೆಲಸ ಮಾತ್ರ ಸಿಕ್ಕೇ ಇಲ್ಲ. ಯುವಕನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹಣ ಹಿಂತಿರುಗಿಸುವಂತೆ ಕೇಳಿದ್ದಾನೆ. ಆಗ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಉದ್ಯೋಗಕ್ಕೆ ವಾಮ ಮಾರ್ಗದಲ್ಲಿ ಹಣ ಕೊಟ್ಟು ಭ್ರಷ್ಟಾಚಾರ ಮಾಡಿದ ಆರೋಪದಡಿ ನಿನ್ನನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಯುವಕ ಸುನೀಲ್ ಕೊನೆಗೆ ಮನೆಯವರ ಒತ್ತಾಸೆ ಮೇರೆಗೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾನೆ.