ಬೆಂಗಳೂರು: ರೈಲ್ವೆ ಕ್ಲೈಮ್ಸ್ ಟ್ರಿಬ್ಯುನಲ್ ತೀರ್ಪನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, 2014ರ ಫೆಬ್ರವರಿಯಲ್ಲಿ ರೈಲು ಹತ್ತಲು ಯತ್ನಿಸಿ ದುರಂತ ಸಾವು ಕಂಡ ಮಹಿಳೆಯ ಕುಟುಂಬಕ್ಕೆ ಎಂಟು ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ.
ಜಯಮ್ಮ ಮತ್ತು ಆಕೆಯ ಸಹೋದರಿ ರತ್ನಮ್ಮ ಎಂಬುವವರು ಅಶೋಕಪುರಂ/ಮೈಸೂರಿಗೆ ಹೋಗುವ ತಿರುಪತಿ ಪ್ಯಾಸೆಂಜರ್ ರೈಲಿನ ಬದಲು ಟುಟಿಕೋರಿನ್ ಎಕ್ಸ್‌ಪ್ರೆಸ್ ರೈಲು ಹತ್ತಿದ್ದಾರೆ.
ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ತಮ್ಮ ತಪ್ಪಿನ ಅರಿವಾಗಿ, ಗಾಬರಿಗೊಂಡು ರೈಲಿನಿಂದ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಜಯಮ್ಮ ಫ್ಲಾಟ್‌ಫಾರ್ಮ್‌ನಲ್ಲಿ ಬಿದ್ದಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ, ರೈಲ್ವೆ ಕ್ಲೈಮ್ಸ್ ಟ್ರಿಬ್ಯುನಲ್, ಮುಂದಿನ ನಿಲ್ದಾಣದವರೆಗೆ ಪ್ರಯಾಣವನ್ನು ಮುಂದುವರಿಸುವುದು ಅಥವಾ ಅಲರಾಂ ಸರಪಳಿಯನ್ನು ಎಳೆಯುವುದು ಮುಂತಾದ ಲಭ್ಯವಿರುವ ಆಯ್ಕೆಗಳನ್ನು ಬಳಸಿಕೊಳ್ಳುವಲ್ಲಿ ಜಯಮ್ಮ ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಿ, ಕುಟುಂಬದ ಅರ್ಜಿಯನ್ನು ತಿರಸ್ಕರಿಸಿತ್ತು.
ಅಲ್ಲದೆ, ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 124-ಎ ಅಡಿಯಲ್ಲಿ ಜಯಮ್ಮ ಅವರ ಸಾವನ್ನು ‘ಸ್ವಯಂ-ಘೋಷಿತ ಗಾಯ’ ಎಂದು ಪರಿಗಣಿಸಿತು ಮತ್ತು ಆ ಮೂಲಕ ಪರಿಹಾರವನ್ನು ಟಿಬ್ಯುನಲ್ ನಿರಾಕರಿಸಿತು.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರು ನ್ಯಾಯಮಂಡಳಿಯ ವ್ಯಾಖ್ಯಾನವನ್ನು ಒಪ್ಪಲಿಲ್ಲ. ಸುಪ್ರೀಂ ಕೋರ್ಟ್ ದೃಢಪಡಿಸಿದಂತೆ ಜಯಮ್ಮ ಅವರು ರೈಲ್ವೆ ಪ್ರಯಾಣಿಕರಾಗಿದ್ದು, ಅವರ ಸಾವು ‘ಅಹಿತಕರ ಘಟನೆಯಿಂದ’ ಸಂಭವಿಸಿದೆ ಎಂದು ಅವರು ಒತ್ತಿ ಹೇಳಿದರು.
ರೈಲ್ವೆ ಟ್ರಿಬ್ಯುನಲ್ ಸೆಕ್ಷನ್ 124-ಎ ಮೇಲೆ ಅವಲಂಬಿತವಾಗಿದ್ದು, ಈ ಪ್ರಕರಣದಲ್ಲಿ ಅದನ್ನು ತಪ್ಪಾಗಿ ಅನ್ವಯಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಪರಿಣಾಮವಾಗಿ, ನ್ಯಾಯಾಲಯವು ಇತ್ತೀಚೆಗೆ ಶೇ 7ರಷ್ಟು ಬಡ್ಡಿಯೊಂದಿಗೆ ನಾಲ್ಕು ಲಕ್ಷ ರೂ. ಪರಿಹಾರ ಪಾವತಿಸಲು ರೈಲ್ವೆಗೆ ಆದೇಶ ನೀಡಿತು. ಕುಟುಂಬಕ್ಕೆ ನೀಡಲಾಗುವ ಅಂತಿಮ ಮೊತ್ತವು ಬಡ್ಡಿ ಸೇರಿದಂತೆ ಎಂಟು ಲಕ್ಷಕ್ಕಿಂತ ಕಡಿಮೆಯಿಲ್ಲ ಎಂದು ಖಚಿತಪಡಿಸಿತು.