November 9, 2024

ಬೆಂಗಳೂರು: ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ಚೇತನ್​ ಚಂದ್ರ ಮೇಲೆ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತಾಯಂದಿರ ದಿನದ ದಿನವೇ ಜನರ ಗುಂಪೊಂದು ಏಕಾಏಕಿ ದಾಳಿ ನಡೆಸಿದ್ದು, ಮುಖ ಕಿತ್ತು ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ.

ತಾಯಂದಿರ ದಿನದ ಹಿನ್ನೆಲೆಯಲ್ಲಿ ನಟ ಚೇತನ್​ ಚಂದ್ರ ತಾಯಿಯನ್ನು ಹೊರಗಡೆ ಕರೆದುಕೊಂಡು ಹೋಗಿ ಬಳಿಕ ದೇವಾಸ್ಥಾನಕ್ಕೆ ತೆರಳಿ ಮರಳುವ ವೇಳೆ ಕಗ್ಗಲಿಪುರ ಸಮೀಪದಲ್ಲಿ ಗಾಡಿ ವಿಚಾರಕ್ಕೆ ಗಲಾಟೆ ತೆಗೆದು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಘಟನೆಯ ವಿವರವನ್ನು ನಟ ಚೇತನ್​ ಚಂದ್ರ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಹಂಚಿಕೊಂಡಿದ್ದಾರೆ.

ಕಗ್ಗಲಿಪುರದ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ವೇಳೆ ತಾವಿರುವ ಪರಿಸ್ಥಿತಿಯಲ್ಲೇ ವಿಡಿಯೋ ಮಾಡಿರುವ ಚೇತನ್​ ಚಂದ್ರ, ಈ ವಿಡಿಯೋವನ್ನು ನನ್ನ ಪತ್ನಿ, ಮಗು, ಹೆತ್ತವರು ನೋಡುತ್ತಿರುತ್ತಾರೆ. ಸದ್ಯ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಚೇತನ್​ ಚಂದ್ರ ಅವರ ಮುಖವೆಲ್ಲಾ ರಕ್ತವಾಗಿದ್ದು, ಧರಿಸಿದ್ದ ಬಟ್ಟೆ ಕೂಡ ರಕ್ತವಾಗಿದೆ.

‘ಇಂದು ಒಂದು ಕೆಟ್ಟ ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡೆ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್​ ಬರುವಾಗ, ಬೇಕಂತಲೇ ನನ್ನ ಗಾಡಿ ಅಡ್ಡ ಹಾಕಿ ಹೊಡೆದರು. ಚೆನ್ನಾಗಿ ಕುಡಿದು ನನ್ನ ಗಾಡಿ ಅಡ್ಡ ಹಾಕಿದ್ದಾರೆ. ಏನಿಲ್ಲ ಅಂದರೂ 20 ಜನರು ಸೇರಿಕೊಂಡು ನನಗೆ ಹೊಡೆದಿದ್ದಾರೆ. ಅದರ ವಿಡಿಯೋ ಇದೆ. ಸದ್ಯ ಕಗ್ಗಲಿಪುರ ಪೊಲೀಸ್​ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ತುಂಬ ಕೆಟ್ಟ ಜನರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ನನಗೆ ನ್ಯಾಯ ಬೇಕು’ ಎಂದು ನಟ ಚೇತನ್​ ಚಂದ್ರ ಆಗ್ರಹಿಸಿದ್ದಾರೆ.

ಘಟನೆಯಲ್ಲಿ ನಟ ಚೇತನ್​ ಚಂದ್ರ ಅವರ ಕಾರಿಗೂ ಹಾನಿಯಾಗಿದ್ದು, ಕಗ್ಗಲಿಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಚೇತನ್​ ಚಂದ್ರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅವರ ಸ್ಥಿತಿ ನೋಡಿ ಆತಂಕ ಪಡುವಂತಾಗಿದೆ. ವಿಡಿಯೋ ನೋಡಿದ ಹಲವರು ‘ನಿಮ್ಮಂತ ಸೆಲೆಬ್ರಿಟಿಗಳಿಗೆ ಈ ರೀತಿ ಆದರೆ ನಮ್ಮಂತ ಜನಗಳಿಗೆ ಇನ್ನು ಯಾವ ತರ. ಏನು ಎಂದು ಪ್ರಶ್ನೆ ಮಾಡಿದರೆ ಈ ತರ ಹಲ್ಲೆ ಮಾಡುತ್ತಾರೆ. ಖಂಡಿತ ಬಿಡಬೇಡಿ. ಕಾನೂನು ಪ್ರಕಾರ ಏನು ಶಿಕ್ಷೆ ಆಗಬೇಕು ಅವರಿಗೆ ಆಗಬೇಕು’ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *