ಹೂಗ್ಲಿ: ಇಂದು ತಾಯಂದಿರ ದಿನದ ಸಂಭ್ರಮ. ಈ ಕ್ಷಣ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಬ್ಬರು ಯುವಕರು ಮೋದಿಯವರ ತಾಯಿ ದಿ.ಹೀರಾಬೆನ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ, ನೀವು ಬಹಳ ಸಮಯದಿಂದ ಕೈ ಎತ್ತಿ ನಿಂತಿದ್ದೀರಿ, ನೀವು ನನ್ನ ತಾಯಿಯ ಚಿತ್ರವನ್ನೂ ತಂದಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಪ್ರಧಾನಿ ಮೋದಿಯವರ ಹೃದಯ ಗೆದ್ದ ಫೋಟೋದ ವಿಡಿಯೋ ಇದೀಗ ವೈರಲ್ ಆಗಿದೆ.
ಉಡುಗೊರೆ ಸ್ವೀಕರಿಸಿದ ಮೋದಿ ಯುವಕನಿಗೆ ಧನ್ಯವಾದ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಪಾಶ್ಚಿಮಾತ್ಯ ಜಗತ್ತು ಇಂದು ತಾಯಂದಿರ ದಿನವನ್ನು ಆಚರಿಸುತ್ತಿದೆ. ನಾವು ಭಾರತದಲ್ಲಿ ತಾಯಿ, ಕಾಳಿ ದೇವತೆ, ದುರ್ಗಾ ದೇವತೆ ಮತ್ತು ತಾಯಿ ಭಾರತಕ್ಕಾಗಿ ವರ್ಷವಿಡೀ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಯುವಕ ನೀಡಿದ ಒಂದು ಚಿತ್ರದಲ್ಲಿ, ಮೋದಿ ನೆಲದ ಮೇಲೆ ಕುಳಿತು ತಾಯಿಯ ಕಾಲ್ಗಳ ಮೇಲೆ ಕೈ ಇಟ್ಟುಕೊಂಡು ಮಾತನಾಡುತ್ತಿರುವ ರೀತಿಯಲ್ಲಿದೆ. ಇನ್ನೊಂದು ಚಿತ್ರದಲ್ಲಿ ತಾಯಿ ಮೋದಿಯವರ ಭುಜದ ಮೇಲೆ ಕೈ ಇರಿಸಿ ನಗುತ್ತಿರುವ ರೀತಿಯಲ್ಲಿದೆ.
ಹೀರಾಬೆನ್ ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ 2022ರ ಡಿ.30 ರಂದು ನಿಧನರಾದರು. ಇತ್ತೀಚೆಗೆ, ಮೂರನೇ ಹಂತದ ಚುನಾವಣೆಯಲ್ಲಿ ಅಹಮದಾಬಾದ್ ಮತಗಟ್ಟೆಯಿಂದ ಮತ ಚಲಾಯಿಸಿದ ಬಳಿಕ ಮೋದಿಯವರು ತಮ್ಮ ದಿವಂಗತ ತಾಯಿಯನ್ನು ನೆನಪಿಸಿಕೊಂಡಿದ್ದರು.
ನಿಮ್ಮ ಹೆಸರು ಹಾಗೂ ವಿಳಾಸ ಫೋಟೋ ಹಿಂದೆ ಬರೆದು ಕೊಡಿ. ನಿಮಗೆ ಪತ್ರ ಬರೆಯುವ ಪ್ರಯತ್ನ ಮಾಡುತ್ತೇನೆ. ಸುಂದರ ಚಿತ್ರ ಬಿಡಿಸಿ ನನಗೆ ನೀಡಿರುವುದಕ್ಕೆ ಧನ್ಯವಾದ ಎಂದು ಮೋದಿ ಹೇಳಿದ್ದಾರೆ. ಎರಡೂ ಚಿತ್ರಗಳು ಪ್ರಧಾನಿ ಮೋದಿ, ತಾಯಿ ಹೀರಾಬೆನ್ ಮೋದಿ ಜೊತೆಗಿನ ಫೋಟೋ ಆಗಿದೆ. ಪೆನ್ಸಿಲ್ ಆರ್ಟ್ ಮೂಲಕ ಬಿಡಿಸಿರುವ ಈ ಚಿತ್ರ ಇದೀಗ ಮೋದಿ ಕೈಸೇರಿದೆ.