ಆಂದ್ರಪ್ರದೇಶ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಮತ್ತು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಶಾಸಕ ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕರ ನಿವಾಸದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆದಿದ್ದು, ಇದರಿಂದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗೆ ಕಾರಣವಾಗಿದೆ.
ಶಾಸಕ ರೆಡ್ಡಿ ಅವರು ಶನಿವಾರ ಸಭೆಗೆ ಪೂರ್ವಾನುಮತಿ ಇಲ್ಲದೆ ಅಲ್ಲು ಅರ್ಜುನ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಸೋಮವಾರ (ಮೇ 13) ನಡೆಯಲಿರುವ ಮತದಾನಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಜಾರಿಯಲ್ಲಿರುವ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ.
ಆಂಧ್ರಪ್ರದೇಶದ ನಂದ್ಯಾಲ ಗ್ರಾಮಾಂತರ ಕ್ಷೇತ್ರದ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿರುವ ತಹಸೀಲ್ದಾರ್ ಪಿ ರಾಮಚಂದ್ರರಾವ್ ಅವರು ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ರೆಡ್ಡಿ ಅವರ ನಿವಾಸಕ್ಕೆ ಅಲ್ಲು ಅರ್ಜುನ್ ಅವರು ಭೇಟಿ ನೀಡಿದಾಗ ಅಪಾರ ಜನರು ನೆರೆದಿದ್ದರು. ಈ ವೇಳೆ ಅಲ್ಲು ಅರ್ಜುನ್, ತನ್ನ ಸ್ನೇಹಿತನಿಗೆ ಸಹಾಯ ಮಾಡಲು ನಂದ್ಯಾಲಕ್ಕೆ ಭೇಟಿ ನೀಡಿದ್ದೇನೆ ಹೊರತು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಕ್ಕಲ್ಲ ಎಂದು ಅಲ್ಲು ಅರ್ಜುನ್ ಸ್ಪಷ್ಟಪಡಿಸಿದ್ದರು.