ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದ ಜನರಿಗೆ ಕುಡಿಯಲು ಯೋಗ್ಯವಲ್ಲದ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯರು ತುತ್ತಾಗಿದ್ದಾರೆ.
ಗ್ರಾಮಸ್ಥರಿಗೆ ಪ್ರತಿ ದಿನ ನಲ್ಲಿ ಮೂಲಕ ಪೂರೈಸುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮಸ್ಥರು ಪಕ್ಕದ ನಾಗನೂರ ಅಥವಾ ನವಲಗುಂದ ಪಟ್ಟಣಕ್ಕೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ.
ಇಲ್ಲಿನ ಕೆರೆಯ ನೀರು ಶುದ್ಧವಾಗಿಲ್ಲ. ಇದೇ ನೀರನ್ನು ಗ್ರಾಮ ಪಂಚಾಯಿತಿಯಿಂದ ಗ್ರಾಮದ ಜನರಿಗೆ ನಿತ್ಯ ಸರಬರಾಜು ಮಾಡಲಾಗುತ್ತಿದೆ. ಗಲೀಜು ಆಗಿರುವ ನೀರನ್ನು ಶುದ್ಧೀಕರಣ ಮಾಡಿ ಬಿಡಬೇಕು ಎಂಬ ಅರಿವು ಸ್ಥಳೀಯ ಅಧಿಕಾರಿಗಳಲ್ಲಿ ಇಲ್ಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನಲ್ಲಿಯಲ್ಲಿ ಬರುವ ನೀರು ಕುಡಿಯುವಾಗ ದುರ್ವಾಸನೆ ಬರುತ್ತಿದೆ. ಈ ನೀರನ್ನು ಕುಡಿದು ಹಲವರಿಗೆ ವಾಂತಿ -ಬೇಧಿ ಕಾಣಿಸಿಕೊಂಡು ಈಗಾಗಲೇ ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಕುಡಿಯುಲು ಯೋಗ್ಯವಲ್ಲದ ಗಲೀಜು ನೀರು ಪೂರೈಸಲಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪಿಸುತ್ತಿದ್ದಾರೆ.