November 19, 2024

ಮಡಿಕೇರಿ: ಪ್ರೌಢ ಶಾಲೆಯ ವಿದ್ಯಾರ್ಥಿನಿಯೋರ್ವಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಯು.ಎಸ್.ಮೀನ (16) ಈ ಬಾರಿಯ ಪರೀಕ್ಷೆಯಲ್ಲಿ 314 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಳು.
ಇದರ ಸಂತೋಷದ ನಡುವೆಯೇ ಮನೆಯವರು ಈಕೆಯ ವಿವಾಹಕ್ಕೆಂದು ಅದೇ ಗ್ರಾಮದ ವ್ಯಕ್ತಿಯ ಜೊತೆ ವಿವಾಹ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಿಯಿಸಿದರು.
ಇದರಿಂದ ಕುಪಿತಗೊಂಡ ಆರೋಪಿ ಸಂಜೆ ವೇಳೆಗೆ ಮೀನಾಳ ಮನೆಗೆ ಬಂದು ಆಕೆಯ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾನೆ ಎಂದು ಎಸ್‌ಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ. ಮೃತೆ ಮೀನಾ ತಂದೆ, ತಾಯಿ, ಮೂವರು ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾಳೆ. ಮೀನಾ ಕೊನೆಯ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *