October 18, 2024

ಧಾರವಾಡ : ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣಾ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ಹಾಗೂ ನಿಷೇಧಿಸಲಾಗಿರುವ ವಿಷಯಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅವುಗಳನ್ನು ಚಾಚು ತಪ್ಪದೇ ಪಾಲಿಸಬೇಕೆಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ, 11-ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಸಾಮಾನ್ಯ ವೀಕ್ಷಕರು, ಚುನಾವಣಾ ಲೆಕ್ಕವೀಕ್ಷಕರು, ಪೊಲೀಸ ವೀಕ್ಷಕರ ಉಪಸ್ಥಿತಿಯಲ್ಲಿ ಎಲ್ಲ ಚುನಾವಣಾ ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗವು ಮತದಾನವನ್ನು ಶಾಂತಿಯುತವಾಗಿ, ನಿರ್ಭಯ, ಮುಕ್ತ ಮತ್ತು ಪಾರದರ್ಶಕವಾಗಿ ಜರುಗಿಸಲು ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರಸ್ನೇಹಿ ವಾತಾವರಣ ರೂಪಿಸಲು ವಿವಿಧ ಕ್ರಮಗಳನ್ನು ವಿಧಿಸಿದೆ. ಅದರಲ್ಲಿ ಮತದಾನ ಮುಕ್ತಾಯವಾಗುವ ಪೂರ್ವದ 72 ಮತ್ತು 48 ಗಂಟೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸಬೇಕಾದ ನಿಯಮಗಳು ಮುಖ್ಯವಾಗಿವೆ. ಈ ಸೂಚಿತ 72 ಮತ್ತು 48 ಗಂಟೆಗಳ ಅವಧಿಯಲ್ಲಿ ಜರುಗುವ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಿಗಾವಹಿಸಲು ಹೆಚ್ಚುವರಿ ತಪಾಸಣಾ ತಂಡಗಳನ್ನು ರಚಿಸಲಾಗಿದ್ದು, ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಚುನಾವಣಾ ಆಯೋಗದ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಈ ಕುರಿತು ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ನಿಗಾ ತಂಡಗಳು, ಎಫ್.ಎಸ್.ಟಿ, ಎಸ್.ಎಸ್.ಟಿ ತಂಡಗಳು ರಾಜಕೀಯ ಚಟುವಟಿಕೆಗಳ ಹಾಗೂ ಚುನಾವಣಾ ನಿಯಮಗಳ ಉಲ್ಲಂಘನೆ ಬಗ್ಗೆ ತೀವ್ರವಾಗಿ ನಿರಂತರ ನಿಗಾವಹಿಸಬೇಕೆಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಚುನಾವಣೆಯ ಕೊನೆಯ ಹಂತದಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ಮುದ್ರಣ ಮಾಧ್ಯಮದ ಮೂಲಕ ಯಾವುದೇ ಅಪರಾಧ ಅಥವಾ ತಪ್ಪುದಾರಿಗೆಳೆಯುವ ರಾಜಕೀಯ ಜಾಹೀರಾತುಗಳನ್ನು ತಪ್ಪಿಸಲು ಈ ನಿಯಮ ಮಾಡಲಾಗಿದೆ. ಪ್ರತಿ ಸಾಮಾನ್ಯ ಲೋಕಸಭೆ ಚುನಾವಣೆಗೂ ಮುನ್ನ ಆಯೋಗವು ಈ ನಿಟ್ಟಿನಲ್ಲಿ ಸೂಚನೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳು ಅಭ್ಯರ್ಥಿಯ ಭಾವಚಿತ್ರ ಹಾಗೂ ಚಿಹ್ನೆಯನ್ನು ಒಳಗೊಂಡಿರುವ ವೊಟರ್ ಸ್ಲಿಪ್‍ಗಳನ್ನು ಬಳಸುವದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ ಗುಪ್ತಾ,ಪೊಲೀಸ ವೀಕ್ಷಕ ಬನ್ವರಲಾಲ ಮೀನಾ, ವೇಚ್ಚ ವೀಕ್ಷಕರಾದ ಭೂಷನ ಪಾಟೀಲ ಹಾಗೂ ಕೆ.ಪಿ ಜಯ್ಕರ, ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಚುನಾವಣಾ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪಕ್ಷೇತರ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಏಜೆಂಟರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *