October 13, 2025
IMG-20240503-WA0027

ಧಾರವಾಡ : ಮೇ 7 ರಂದು ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅಂದು ಕಾರ್ಮಿಕರಿಗೂ ಸಹ ವೇತನ ಸಹಿತ ರಜೆ ನೀಡಲಾಗಿದೆ. ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಇಂದು ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಸಂಸ್ಥೆ ಸಮೂಹದ ಟಾಟಾ ಹಿಟಾಚಿ ಕೈಗಾರಿಕಾ ಪ್ರದೇಶದ ಕೇಂದ್ರದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಯುಕ್ತ ಧಾರವಾಡ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳ ಮುಖಾಂತರ ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸಲು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಮತ ಚಲಾಯಿಸಬೇಕು. ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಕಾಮತ್ ಅವರು ವಹಿಸಿದ್ದರು.

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್. ವಸ್ತ್ರದ್ ಮಾತನಾಡಿ, ಚುನಾವಣೆಯ ಕುರಿತು ತಾವೆಲ್ಲರೂ ಚುನಾವಣಾ ಆಯೋಗದ ರಾಯಭಾರಿಗಳಾಗಿ ತಮ್ಮ ಮನೆಯಲ್ಲಿ, ಅಕ್ಕಪಕ್ಕದ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ಕಡ್ಡಾಯವಾಗಿ ಮತದಾನ ಮಾಡಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಕಡಿಮೆ ಮತದಾನವಾಗಿರುವ ಸ್ಥಳಗಳಲ್ಲಿ ಶೇಕಡಾ ಹೆಚ್ಚಿನ ಮತದಾನದ ಪ್ರಮಾಣ ಆಗುವಂತೆ ಸೂಚಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಕಂಡ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ಪ್ರತಿಜ್ಞಾವಿಧಿಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶಿವಪುತ್ರಪ್ಪ, ಟಾಟಾ ಹಿಟಾಚಿಯ ಸುರಕ್ಷತೆ ಹಾಗೂ ಆಡಳಿತ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ದೀಕ್ಷಿತ್, ಕೆ.ಎಮ್. ಶೇಖ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *