ಧಾರವಾಡ: ಇದೀಗ ಅಧಿಕ ಬಿಸಿಲಿನ ತಾಪಮಾನ ಹಾಗೂ ಬಿಸಿಗಾಳಿಯಿಂದ ತತ್ತರಿಸುತ್ತಿದೆ. ಧಾರವಾಡ ಜಿಲ್ಲೆಯ ಜನರಂತೂ ಬಿಸಿಲಿನ ತಾಪಮಾನದಿಂದ ತತ್ತರಿಸಿ ಹೋಗಿದ್ದಾರೆ.
ದಿನದಿಂದ ದಿನಕ್ಕೆ ಉಷ್ಣತೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹುಟ್ಟುವಂತೆ ಮಾಡಿದೆ. ಪ್ರತಿದಿನ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಬಿಸಿಲು ರಣಗುಡುತ್ತಿದ್ದು, ಜನರು ಹೊರಗಡೆ ಬರುವುದೇ ಕಷ್ಟವಾಗಿದೆ. ಬೆಳಿಗ್ಗೆ 9 ಗಂಟೆಯಾದರೆ ಸಾಕು ಸೂರ್ಯ ನೆತ್ತಿಯ ಮೇಲೆ ಬಂದಂತೆ ಭಾಸವಾಗುತ್ತದೆ. ಏಕಾಏಕಿ ಈ ರೀತಿಯ ತಾಪಮಾನ ಏರಿಕೆಯಿಂದ ಜನ ನಿಜಕ್ಕೂ ಕಂಗಾಲಾಗಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿನ ಬಹುತೇಕ ಕೆರೆ, ಕಟ್ಟೆಗಳು ಬತ್ತಿ ಹೋಗಿವೆ. ಗ್ರಾಮೀಣ ಭಾಗದಲ್ಲಿ 15 ದಿನಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕೊಳವೆ ಬಾವಿಗಳ ಅಂತರ್ಜಲಮಟ್ಟ ಬಿಸಿಲಿನ ಹೊಡೆತಕ್ಕೆ ಪಾತಾಳ ಸೇರಿದೆ. ಈ ಬಿಸಿಲಿನ ವಾತಾವರಣ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೆ, ಇನ್ನೊಂದೆಡೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ.
ಕಳೆದ ವಾರ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಇದರಿಂದ ಬಿಸಿಲಿನ ತಾಪಮಾನ ಕುಗ್ಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಮೇ ತಿಂಗಳ ಆರಂಭದ ಹೊತ್ತಿನಲ್ಲೇ ಬೆಂಕಿಯಂತೆ ಬಿಸಿಲು ಸುಡುತ್ತಿದೆ. ಇನ್ನೂ ಒಂದು ತಿಂಗಳ ಕಾಲ ಈ ಬಿಸಿಲಿನ ತಾಪಮಾನವನ್ನು ಜನ ತಡೆದುಕೊಳ್ಳಲೇಬೇಕಿದೆ.