September 17, 2024

ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಯ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ಇಂದು ಮಂಗಳವಾರ ಹುಬ್ಬಳ್ಳಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಈಗಾಗಲೇ ಸಂಸದರನ್ನು ಅಮಾನತು ಮಾಡಿ ಆದೇಶಿಸಲಾಗಿದ್ದು, ಇದೀಗ ಎಚ್ಡಿ ರೇವಣ್ಣ ಮೇಲೂ ಕ್ರಮವಹಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್ಡ್ರೈವ್ ವಿಚಾರ ಹೊರ ಬರುತ್ತಿದ್ದಂತೆ ವಿದೇಶಕ್ಕೆ ತೆರಳಿರುವ ಮಗನ ಪರ ತಂದೆ ಎಚ್ಡಿ ರೇವಣ್ಣ ಮಾತನಾಡಿದ್ದರು. ಇದು ನಾಲ್ಕೈದು ವರ್ಷದ ಹಿಂದಿನ ಕೇಸು, ರಾಜಕೀಯ ಪ್ರೇರಿತ, ಪ್ರಜ್ವಲ್ ವಿದೇಶಕ್ಕೆ ತೆರಳುವುದು ಮೊದಲೇ ನಿಶ್ಚಯವಾಗಿತ್ತು ಎಂದೆಲ್ಲ ಹೇಳಿದ್ದರು. ಸದ್ಯ ಈ ಪ್ರಕರಣದಿಂದ ಜೆಡಿಎಸ್ಗೆ ಹಾಗೂ ಮೈತ್ರಿಗೆ ಮುಜುಗರ ತಂದಿರುವುದು ಸುಳ್ಳಲ್ಲ.

ಈ ಮುಜುಗರ ತಪ್ಪಿಸಲು ಹಾಗೂ ಚುನಾವಣೆ ಹೊತ್ತಲ್ಲಿ ತಪ್ಪಿತಸ್ಥರ ವಿರುದ್ಧ ಜೆಡಿಎಸ್ ಪಕ್ಷ ಸೂಕ್ತ ಕ್ರಮ ಕೈಗೊಂಡಿದೆ ಎಂಬ ಸಂದೇಶ ಸಾರಲು ಕೆಲವು ಮಹತ್ವದ ನೀರ್ಣಯ ಕೈಗೊಳ್ಳಲಿದೆ. ಈ ಸಂಬಂಧ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ, ಹಿರಿಯ ನಾಯಕ ಜಿಟಿ ದೇವೇಗೌಡ ಅವರ ನೇತೃತ್ವದಲ್ಲಿ ಪ್ರಮುಖ ಚರ್ಚೆಗಳು ನಡೆದಿವೆ.

ಪ್ರಜ್ವಲ್ ರೇವಣ್ಣರನ್ನು ಉಚ್ಛಾಟಿಸಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಮಹತ್ವದ ಆದೇಶವನ್ನು ಸೋಮವಾರ ಹೊರಡಿಸಿದ್ದರು. ಇದೀಗ ಪ್ರಕರಣದಿಂದಾ ಡ್ಯಾಮೆಜ್ ಕಂಟ್ರೋಲ್ ಮಾಡಲು ಹಾಗೂ ಎಚ್ಡಿ ರೇವಣ್ಣ ವಿರುದ್ಧ ಕೇಳಿ ಬಂದ ಆರೋಪ ದೂರುಗಳ ಕುರಿತು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಎಚ್ಡಿ ರೇವಣ್ಣರನ್ನು ಪಕ್ಷದಿಂದ ಉಚ್ಛಾಟಿಸಬಹುದು. ಈ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಲಕ್ಷಣಗಳು ಇವೆ. ಅಲ್ಲದೇ ರಾಜ್ಯದಲ್ಲಿ ಇನ್ನೂ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಇದರ ಮೇಲೆ ಪರಿಣಾಮ ಬೀರದಂತೆ ಇಂದಿನ ಸಭೆಯಲ್ಲಿ ನಿರ್ಧಾರಗಳು ಹೊರ ಬೀಳುವ ಸಾಧ್ಯತೆ ಇದೆ. ಅದರಲ್ಲೂ ಎಚ್ಡಿ ರೇವಣ್ಣ ಮೇಲೆ ಸೂಕ್ತ ಕ್ರಮ ಜರುಗಿಸುವ ನಿರೀಕ್ಷೆಗಳು ಇವೆ ಎಂದು ತಿಳಿದು ಬಂದಿದೆ.

 

Leave a Reply

Your email address will not be published. Required fields are marked *