ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಪತ್ತೆಹಚ್ಚಿದ್ದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದು ಹೊಸದಾಗಿ ಪ್ರಾರಂಭಿಸಲಾದ ಟರ್ಮಿನಲ್ 2ರಲ್ಲಿ ಮೊದಲ ಚಿನ್ನದ ಕಳ್ಳಸಾಗಣೆ ದಂಧೆಯಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಸುಳಿವಿನ ಮೇರೆಗೆ ಏರ್ ಇಂಟೆಲಿಜೆನ್ಸ್ ಯುನಿಟ್ ಡಿ ಬ್ಯಾಚ್ ಅಧಿಕಾರಿಗಳು ಏರ್ ಏಷ್ಯಾ ಫ್ಲೈಟ್ I5 1536 ಮೂಲಕ ಕೋಲ್ಕತ್ತಾದಿಂದ ಬಂದ ಪ್ರಯಾಣಿಕರನ್ನು ತಡೆದಾಗ ಕಳ್ಳಸಾಗಣೆ ಬೆಳಕಿಗೆ ಬಂದಿದೆ.
ಚೆನ್ನೈ ಮೂಲದ ವ್ಯಕ್ತಿ ತನ್ನ ಗುದನಾಳದಲ್ಲಿ ತಲಾ 20 ಗ್ರಾಂ ತೂಕದ 33 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ 2 ರಲ್ಲಿ ದೇಶೀಯ ಮಾರ್ಗದ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆ ವ್ಯಕ್ತಿ ತಲಾ 15 ಚಿನ್ನದ ಬಿಸ್ಕೆಟ್‌ಗಳನ್ನು ಹೊತ್ತೊಯ್ಯುವ ಡಕ್ಟ್ ಟೇಪ್‌ನಿಂದ ಮುಚ್ಚಿದ ಎರಡು ಪೌಚ್‌ಗಳನ್ನು ಹೊತ್ತೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಪ್ರಕರಣ ದಾಕಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.